Post Views: 124
LOCAL NEWS : 272 ಕೋಟಿ ವೆಚ್ಚದ 21 ಕೆರೆಗಳ ತುಂಬಿಸುವ ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭ : ಯರಾಶಿ

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಏ. 09 : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಅವಳಿ ತಾಲೂಕುಗಳಾದ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ₹272 ಕೋಟಿ ವೆಚ್ಚದಲ್ಲಿ 21 ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯಾರಾಶಿ ಅವರು ತಿಳಿಸಿದ್ದಾರೆ.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು (ಗುರುವಾರ) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ರೈತರ ದಶಕಗಳ ಕನಸು ಇದೀಗ ನನಸಾಗುತ್ತಿದೆ. ಶಾಸಕ ಬಸವರಾಜ್ ರಾಯರೆಡ್ಡಿ ಅವರ ಇಚ್ಛಾಶಕ್ತಿ ಮತ್ತು ಪ್ರಯತ್ನವೇ ಈ ಯೋಜನೆ ಜಾರಿಯಾಗಲು ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಈ ಯೋಜನೆಯಡಿಯಲ್ಲಿ ಕೃಷ್ಣ ನದಿಯ ನಾರಾಯಣಪುರ ಅಣೆಕಟ್ಟು ಹಿಂಬದಿ ನೀರನ್ನು ಎತ್ತಿ 21 ಕೆರೆಗಳನ್ನು ತುಂಬಿಸುವ ಕಾರ್ಯ ಕೈಗೊಳ್ಳಲಾಗುತ್ತದೆ. ಇಂಟೇಕ್ ಕಾಲುವೆ/ಪೈಪ್, ಜಾಕ್‌ವೆಲ್, ಪಂಪ್ ಹೌಸ್, ವರ್ಟಿಕಲ್ ಟರ್ಬೈನ್ ಪಂಪ್‌ಗಳು, ವಿದ್ಯುತ್ ಸಬ್‌ಸ್ಟೇಶನ್, ಟ್ರಾನ್ಸ್‌ಮಿಷನ್ ಲೈನ್, ರೈಸಿಂಗ್ ಮೇನ್ ಹಾಗೂ MS/HDPE ಪೈಪ್ ಮೂಲಕ ವಿತರಣಾ ಜಾಲ ನಿರ್ಮಾಣ ಸೇರಿದಂತೆ ವಿವಿಧ ನಾಗರಿಕ ಹಾಗೂ ವಿದ್ಯುತ್ ಕಾಮಗಾರಿಗಳು ಕೈಗೊಳ್ಳಲಾಗುತ್ತವೆ.
ಕಾಮಗಾರಿಯನ್ನು ಟರ್ನ್‌ಕೀ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದ್ದು, ಪೂರ್ಣಗೊಂಡ ನಂತರ 5 ವರ್ಷಗಳ ನಿರ್ವಹಣೆಯ ಜವಾಬ್ದಾರಿಯೂ ಗುತ್ತಿಗೆದಾರರದ್ದಾಗಿರುತ್ತದೆ.
ಯೋಜನೆಯ ವ್ಯಾಪ್ತಿಯಲ್ಲಿ ಕರಮುಡಿ, ತೊಂಡಿಹಾಳ, ಯರೇಹಂಚಿನಾಳ, ಸಿದ್ದೇಕೊಪ್ಪ, ಮುಧೋಳ, ಬನ್ನಿಕೊಪ್ಪ, ಮಂಡಲಗೇರಿ, ದ್ಯಾಂಪುರ, ರಾಜೂರ, ಯಾವಣಕಿ, ಬಂಡಿಹಾಳ, ಬಿನ್ನಾಳ, ಚಿಕ್ಕೇನಕೊಪ್ಪ, ಸೋಂಪುರ, ಇಟಗಿ, ಚಿಕ್ಕಬನ್ನಿಗೋಳ, ಲಿಂಗನಬಂಡಿ, ಸಂಗನಹಾಳ, ಆಡೂರ, ಕುಕನೂರು, ನಿಟ್ಟಾಲಿ, ಭಟಪನಹಳ್ಳಿ, ಮಾಳೀಕೊಪ್ಪ, ಮನ್ನಾಪೂರ, ಲಕಮನಗುಳೆ ಹಾಗೂ ಹಗೇದಾಳ ಸೇರಿದಂತೆ ಹಲವಾರು ಕೆರೆಗಳು ಸೇರಿವೆ ಎಂದು ಅವರು ವಿವರಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚಿನ ಭರವಸೆ ನೀಡಲು ಸಾಧ್ಯವಿಲ್ಲ. ತೀವ್ರಗತಿಯಲ್ಲಿ ನಡೆಯಬೇಕಾದ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಸ್ಥಗಿತಗೊಂಡಿರುವ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಅಲ್ಲದೆ, ನರೇಗಾ ಯೋಜನೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಬೇಕಾದ ಬಾಕಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ವಿಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G). ಯೋಜನೆಗೆ ಸ್ಪಷ್ಟ ಕ್ರಿಯಾ ಯೋಜನೆ ಇಲ್ಲದಿರುವುದರಿಂದ ದಿನಗೂಲಿ ಕಾರ್ಮಿಕರಿಗೆ ಉದ್ಯೋಗ ಸಿಗದೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವೂ ಆರ್ಥಿಕ ಹೊರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಯೋಜನೆಗಳಿಗೆ ಸಮರ್ಪಕ ಅನುದಾನ ಒದಗಿಸುವುದು ಕಷ್ಟಕರವಾಗಿದೆ ಎಂದು ಹೇಳಿದರು.
ಟೆಂಡರ್ ಪ್ರಕ್ರಿಯೆ ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ನಡೆಯಲಿದ್ದು, ಮಾರ್ಚ್ 26ರಿಂದ ಏಪ್ರಿಲ್ 28ರವರೆಗೆ ಸಂಜೆ 5 ಗಂಟೆಯೊಳಗೆ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಏಪ್ರಿಲ್ 30ರಂದು ಬೆಳಿಗ್ಗೆ 11 ಗಂಟೆಗೆ ಟೆಕ್ನಿಕಲ್ ಬಿಡ್ ತೆರೆಯಲಾಗುತ್ತದೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಣಮಂತ ಗೌಡ ಚಂಡೂರ್, ಮಂಜುನಾಥ್ ಕಡೆಮನಿ, ಉದಯ್ ರಾಯರೆಡ್ಡಿ, ಸಂಗಮೇಶ ಗುತ್ತಿ, ರಾಘವೇಂದ್ರ ಕಾತರಕಿ, ಮೊಹಮ್ಮದ್ ರಫಿ ಮಂಡಲಗಿರಿ, ಮಹಾಂತೇಶ್ ಮುಧೋಳ, ಯಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.