Post Views: 13
LOCAL NEWS : ಶ್ರೇಣೀಕೃತ ವ್ಯವಸ್ಥೆ ನಿರ್ಮೂಲವೇ ಸಮ ಸಮಾಜದ ದಾರಿ: ಶಾಸಕ ಬಸವರಾಜ ರಾಯರೆಡ್ಡಿ ಅಭಿಮತ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಏಪ್ರಿಲ್ 15 : ತಾಲ್ಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಯಲಬುರ್ಗಾ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ಸಮಾರಂಭವನ್ನು ಪಟ್ಟಣದ ಗವಿಸಿದ್ದೇಶ್ವರ ಶಾಲಾ ಆವರಣದಲ್ಲಿ ಮಂಗಳವಾರ ಆಚರಿಸಲಾಯಿತು.
ಏಪ್ರಿಲ್ 14 ರಂದು ಬೆಳಿಗ್ಗೆ 10:30 ಗಂಟೆಗೆ ಡಾ. ಅಂಬೇಡ್ಕರ್ ಸರ್ಕಲ್‌ನಲ್ಲಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭವಾಗಿ, ಕೋಳಿಪೇಟೆ, ತೇರಿನ ಮನೆ, ಶಿರೂರು ವೀರಭದ್ರಪ್ಪ ಸರ್ಕಲ್ ಮಾರ್ಗವಾಗಿ ಗವಿಸಿದ್ದೇಶ್ವರ ಪ್ರೌಢ ಶಾಲಾ ಆವರಣದವರೆಗೆ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಮಧ್ಯಾಹ್ನ 12:30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಸಮಾಜದಲ್ಲಿ ಶ್ರೇಣೀಕೃತ ವ್ಯವಸ್ಥೆ ನಿರ್ಮೂಲವಾಗಿ ಎಲ್ಲರೂ ಸಮಾನತೆಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು . ಶಿಕ್ಷಣ ಎಂದರೆ ಕೇವಲ ಅಕ್ಷರಜ್ಞಾನವಲ್ಲ; ವಿಚಾರ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳುವುದಾಗಿದೆ. ಇಂದಿಗೂ ಜಾತಿ ಆಧಾರಿತ ಬೇಧಾಭಿಪ್ರಾಯಗಳು ಮುಂದುವರಿದಿರುವುದು ವಿಷಾದಕರ ಸಂಗತಿ ಎಂದರು.
ಹರಿಜನರು ಪ್ರತ್ಯೇಕ ಬಡಾವಣೆಗಳಲ್ಲಿ ವಾಸಿಸುವ ಸ್ಥಿತಿ ಇನ್ನು ಮುಂದುವರಿಯಬಾರದು. ಎಲ್ಲರೂ ಒಂದಾಗಿ ಬೆರೆತು ಬದುಕಬೇಕು. ಸಮಾನತೆ ದೃಷ್ಟಿಯಿಂದ ಸಮಾಜದಲ್ಲಿ ಬದಲಾವಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಜೀವನ ಇನ್ನಷ್ಟು ಸಂಕಷ್ಟಕರವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಬಸವಣ್ಣ ಅವರು ಶ್ರೇಣೀಕೃತ ವ್ಯವಸ್ಥೆಗೆ ವಿರೋಧವಾಗಿ ಹೋರಾಡಿದವರು. ಅವರ ತತ್ವಗಳನ್ನು ಅನುಸರಿಸಿ ಜಾತಿ ತಾರತಮ್ಯ ನಿರ್ಮೂಲ ಮಾಡಬೇಕು. ಮನುಸ್ಮೃತಿ ಆಧಾರಿತ ವ್ಯವಸ್ಥೆಯನ್ನು ತೊಲಗಿಸಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಬೇಕು . ಸಂವಿಧಾನದ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಮಹಿಳೆಯರಿಗೆ 33% ಮೀಸಲಾತಿ ಜಾರಿಗೆ ತರುವಲ್ಲಿ ಮನ್ಮೋಹನ್ ಸಿಂಗ್ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು. ಇಂದಿನ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
“ನನಗೆ ಜಾತಿ, ಧರ್ಮ ಎನ್ನುವ ಭೇದವಿಲ್ಲ. ನಾನು ಮನುಷ್ಯ ಜಾತಿಗೆ ಸೇರಿದವನು; ನಾನು ಪಕ್ಕಾ ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿ,” ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ನಿವೃತ್ತ ಉಪನ್ಯಾಸಕ ಕೆ.ಆರ್. ದುರ್ಗಾದಾಸ್ ಮಾತನಾಡಿ, ಸಂವಿಧಾನವು ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡಿದೆ. “ಒಬ್ಬರಿಗೆ ಒಂದು ಮತ” ಎಂಬ ತತ್ವವು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ ಎಂದರು.
ಶೋಷಿತ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಮೂಲಕ ಸಮಾನ ಅವಕಾಶ ಕಲ್ಪಿಸಲಾಗಿದೆ. ಆಡಳಿತ ನಡೆಸುವವರಿಗೆ ಯಾವುದೇ ಧರ್ಮವಿಲ್ಲ; ಎಲ್ಲರಿಗೂ ಸಮಾನತೆ ಎಂಬುದೇ ಮೂಲತತ್ವ ಎಂದು ಹೇಳಿದರು. ಡಾ. ಬಾಬು ಜಗಜೀವನ ರಾಮ್ ಅವರು ಮಹಾನ್ ತತ್ವಜ್ಞಾನಿಯಾಗಿದ್ದು, ದೇಶಕ್ಕೆ ಅಗತ್ಯವಾದ ನಾಯಕತ್ವ ನೀಡಿದವರು. ಅಂಬೇಡ್ಕರ್ ಮತ್ತು ಜಗಜೀವನ ರಾಮ್ ದೇಶದ ಎರಡು ಕಣ್ಣುಗಳಂತವರು ಎಂದು ಅಭಿಪ್ರಾಯಪಟ್ಟರು.
ಶಾರದಾಂಬ ನಾಟ್ಯ ಬೆಳಗಾವಿ ತಂಡದಿಂದ ಅಂಬೇಡ್ಕರ್ ಅವರ ಬಾಲ್ಯ ಜೀವನದ ಕುರಿತು ನೃತ್ಯರೂಪಕ ಪ್ರದರ್ಶನ ನಡೆಯಿತು.
ವೇದಿಕೆ ಕಾರ್ಯಕ್ರಮದಲ್ಲಿ ತಹಶೀಲ್ದಾರ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷ ಬಸವರಾಜ ಬೆಣ್ಣೆಶಿರೂರು, ತಾ.ಪಂ. ಇಓ ಸಂತೋಷ ಪಾಟೀಲ್ ಬಿರಾದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಬೆಟ್ಟದೇಶ ಮಾಳೆಕೊಪ್ಪ, ಜೆಸ್ಕಾಂ ಎಇ ನಾಗರಾಜ, ಪ.ಪಂ. ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ದಲಿತ ಮುಖಂಡರಾದ ಲಕ್ಷಣ ಕಾಳಿ, ಯಮನೂರಪ್ಪ ಗೊರಲೇಕೊಪ್ಪ, ಶಂಕರ್ ಭಂಡಾರಿ, ಈಶಪ್ಪ ದೊಡ್ಡಮನಿ, ಬಸವರಾಜ ನಡುವಲಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಿಆರ್‌ಪಿ ಪೀರಸಾಬ್ ದಪ್ಪೆದಾರ ಹಾಗೂ ದೈಹಿಕ ಶಿಕ್ಷಕ ಶರಣಪ್ಪ ವೀರಾಪೂರ ನಿರೂಪಿಸಿದರು.