Post Views: 24
LOCAL NEWS : ಭಟಪನಹಳ್ಳಿಯಲ್ಲಿ ನಾಳೆ ಭೀಮಾಂಬಿಕಾ ಜಾತ್ರಾ ಸಂಭ್ರಮ…!!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಏಪ್ರಿಲ್ 16 : ಕುಕನೂರು ತಾಲೂಕಿನ ಭಟಪನಹಳ್ಳಿ ಗ್ರಾಮದಲ್ಲಿ ಭೀಮಾಂಬಿಕಾ ದೇವಿ ಜಾತ್ರಾ ಮಹೋತ್ಸವ, ನೂತನ ಪಂಚಕಳಸ ತೇರಿನ ಲೋಕಾರ್ಪಣೆ, ಸಾಮೂಹಿಕ ವಿವಾಹ ಹಾಗೂ ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮಗಳು ಏಪ್ರಿಲ್ 17 ಮತ್ತು 18ರಂದು ಎರಡು ದಿನಗಳ ಕಾಲ ವೈಭವದಿಂದ ನಡೆಯಲಿವೆ ಎಂದು ಕೆಪಿಎಸ್ಸಿ ಮಾಜಿ ಸದಸ್ಯ ಡಾ. ಎಚ್.ವಿ. ಪಾಟೀಲ್ ಅವರು ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು (ಗುರುವಾರ) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 29 ವರ್ಷಗಳಿಂದ ಶಿವಶರಣೆ ತಾಯಿ ಭೀಮಾಂಬಿಕಾ ದೇವಿಯ ಪುರಾಣ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ಪುರಾಣ ಮಂಗಲ ದಿನದಂದು ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗುತ್ತಿದೆ.
ಭಕ್ತರ ಆಶಯದಂತೆ ಸುಮಾರು ₹25 ಲಕ್ಷ ವೆಚ್ಚದಲ್ಲಿ ನೂತನ ಪಂಚಕಳಸ ರಥ ನಿರ್ಮಿಸಲಾಗಿದ್ದು, ಏಪ್ರಿಲ್ 18ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಏ. 17ರಂದು ಸಂಜೆ 4 ಗಂಟೆಗೆ ಜಾತ್ರಾ ಮಹೋತ್ಸವ ಹಾಗೂ ಪಂಚಕಳಸ ತೇರಿನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಕಾಗಿನೆಲೆ ಮಹಾಸಂಸ್ಥಾನದ ನಿರಂಜನಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಇತರ ಮಠಾಧೀಶರೂ ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಸಂಸದ ಬಸವರಾಜ ಹಿಟ್ನಾಳ ಉದ್ಘಾಟಕರಾಗಿರುತ್ತಾರೆ. ಕೆ. ವಿರುಪಾಕ್ಷಪ್ಪ ಸುಕಾಲಪೇಟ ಅಧ್ಯಕ್ಷತೆ ವಹಿಸಲಿದ್ದು, ಶರಣು ತಳ್ಳಿಕೇರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಲಘು ರಥೋತ್ಸವ ನಡೆಯಲಿದೆ. ಅದೇ ದಿನ ಬೆಳಿಗ್ಗೆ ಸುಮಂಗಲೆಯರಿಂದ ಕುಂಭಮೇಳ ನೆರವೇರಲಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಂಡರಗಿ ಅನ್ನದಾನೇಶ್ವರ ಮಠದ ಡಾ. ನಾಡೋಜ ಅನ್ನದಾನೇಶ್ವರ ಮಹಾಶಿವಯೋಗಿಗಳು, ಶಿರಹಟ್ಟಿ ಸಂಸ್ಥಾನ ಮಠದ ಜಗದ್ಗುರು ಫಕೀರ ಸಿದ್ದರಾಮ ಸ್ವಾಮಿಗಳು, ಕೊಪ್ಪಳ ಗವಿಮಠ ಸಂಸ್ಥಾನದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ನಿರಂಜನಾನಂದಪುರಿ ಮಹಾಸ್ವಾಮಿಗಳು, ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಮಹಾಸ್ವಾಮಿಗಳು, ಕುಕುನೂರು ಅನ್ನದಾನೇಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿ, ಮಂಗಳೂರಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಗದಗ ತಾಲೂಕಿನ ಬಳಗಾನೂರು ಸುಕ್ಷೇತ್ರದ ಶಿವಶಾಂತವೀರ ಶರಣರು, ಹಾಲವರ್ತಿ–ಬಾದಿಮನಾಳ ಕಾಗಿನೆಲೆ ಮಹಾಸಂಸ್ಥಾನ ಗುರುಪೀಠದ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ತುರಿವಿಹಾಳ ಅಮೋಘಸಿದ್ದೇಶ್ವರ ಮಠದ ಮಾದಯ್ಯ ಗುರುವಿನವರು ವಹಿಸಲಿದ್ದಾರೆ ಎಂದು ಹೇಳಿದರು.
ಏ. 18ರಂದು ಬೆಳಿಗ್ಗೆ 11 ಗಂಟೆಗೆ ವಿವಿಧ ಜಾತಿಯ 11 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ನಂತರ ಮಠಾಧೀಶರ ಆಶೀರ್ವಚನ ಕಾರ್ಯಕ್ರಮ ಜರುಗಲಿದೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ, ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 6 ಗಂಟೆಗೆ ಪಂಚಕಳಸ ತೇರಿಗೆ ಚಾಲನೆ ನೀಡಲಾಗುತ್ತದೆ.
ಬಳಿಕ ಪುರಾಣ ಮಂಗಲ ಕಾರ್ಯಕ್ರಮ ನಡೆಯಲಿದ್ದು, ಪುರಾಣ ಪ್ರವಚನವನ್ನು ಕಲ್ಲಯ್ಯ ಶಾಸ್ತ್ರಿಗಳು ನಡೆಸಲಿದ್ದಾರೆ. ಸಂಗೀತ ಸೇವೆಯನ್ನು ಹಾಲಕೇರಿ ದ್ಯಾಮಣ್ಣ ಗವಾಯಿಗಳು ಹಾಗೂ ತಬಲಾ ವಾದನವನ್ನು ಸ್ವಾತಿ ಖಾದರ್ ಸಾಬ್ ಬಳಿಗಾರ ನೀಡಲಿದ್ದಾರೆ. ರಾತ್ರಿ 10 ಗಂಟೆಗೆ “ರೈತರ ರಾಜ್ಯದಲ್ಲಿ ರಾಯಣ್ಣ” ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಭೀಮಾಂಬಿಕಾ ದೇವಿ ಸೇವಾ ಸಮಿತಿಯ ಅಧ್ಯಕ್ಷ ರಾಜಶೇಖರ್ ಕರಮೂಡಿ , ಮಲ್ಲಿಕಾರ್ಜುನ ಕರಮೂಡಿ, ಮಲ್ಲಪ್ಪ ಕಲಗೋಡಿ, ಶ್ರೀಧರ್ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.