You are currently viewing BIG NEWS : ಅಂಬೇಡ್ಕರ್ ಸೇರಿದಂತೆ ಮಹನೀಯರ ಭಾವಚಿತ್ರಗಳಿಗೆ ಸೆಗಣಿ ಎರಚಿ ಅವಮಾನ : ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..!

BIG NEWS : ಅಂಬೇಡ್ಕರ್ ಸೇರಿದಂತೆ ಮಹನೀಯರ ಭಾವಚಿತ್ರಗಳಿಗೆ ಸೆಗಣಿ ಎರಚಿ ಅವಮಾನ : ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..!

BIG NEWS : ಅಂಬೇಡ್ಕರ್ ಸೇರಿದಂತೆ ಮಹನೀಯರ ಭಾವಚಿತ್ರಗಳಿಗೆ ಸೆಗಣಿ ಎರಚಿ ಅವಮಾನ : ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..!

ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮ : 

ಕುಕನೂರು, ಏಪ್ರಿಲ್ 16 : ತಾಲೂಕಿನ ವಿರಾಪುರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ವಿವಿಧ ಮಹನೀಯರ ಭಾವಚಿತ್ರಗಳು ಹಾಗೂ ನಾಮಫಲಕಕ್ಕೆ ಕಿಡಿಗೇಡಿಗಳು ಸೆಗಣಿ ಎರಚಿ ಅವಮಾನಗೈದ ಘಟನೆ ಬುಧವಾರ ರಾತ್ರೋರಾತ್ರಿ ನಡೆದಿದೆ.

ದೇಶದ ಅಸ್ಮಿತೆ ಹಾಗೂ ಸಾಮಾಜಿಕ ನ್ಯಾಯದ ಸಂಕೇತವಾಗಿರುವ, ಸಂವಿಧಾನ ಶಿಲ್ಪಿ ಬಿ .ಆರ್ . ಅಂಬೇಡ್ಕರ್ ಸೇರಿದಂತೆ ರಾಮಜೀ, ಬಸವೇಶ್ವರ, ಬುದ್ಧ, ಪೆರಿಯಾರ್, ಬಾಬು ಜಗಜೀವನರಾಂ, ಸಾವಿತ್ರಿಬಾಯಿ ಫುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಗಳಿಗೆ ವಿಕೃತಿ ಮೆರೆದಿರುವುದು ಬೆಳಗಿನ ಜಾವ ಬೆಳಕಿಗೆ ಬಂದಿದೆ.

ಘಟನೆಯಿಂದ ಗ್ರಾಮದಲ್ಲಿ ವಿವಿಧ ದಲಿತ ಸಂಘಟನೆಗಳು ಸೇರಿ ಬೆಳಗ್ಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಉದ್ವಿಗ್ನತೆ ವಾತಾವರಣ ಉಂಟಾಗಿದ್ದು, ಸಾರ್ವಜನಿಕರು ಹಾಗೂ ದಲಿತ ಸಂಘಟನೆಗಳ ಮುಖಂಡರು ತೀವ್ರ ಖಂಡಿಸಿದ್ದಾರೆ.

“ಮಹನೀಯರು ಎಲ್ಲರಿಗೂ ಸೇರಿದವರು; ಅವರ ಭಾವಚಿತ್ರಕ್ಕೆ ಅವಮಾನ ಮಾಡುವುದು ದೇಶಕ್ಕೂ ಅವಮಾನ” ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಮೂರು–ನಾಲ್ಕು ದಿನಗಳ ಹಿಂದೆ ಕೆಲ ಸವರ್ಣಿಯ ಹಾಗೂ ದಲಿತ ಸಮುದಾಯದ ವ್ಯಕ್ತಿಗಳ ನಡುವೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಗ್ರಾಮದಲ್ಲಿ ಸುಮಾರು 2000ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ದಲಿತ ಸಮುದಾಯದ ಸುಮಾರು 120 ಮನೆಗಳಿದ್ದು 300–400 ಜನರು ವಾಸಿಸುತ್ತಿದ್ದಾರೆ.

ಘಟನೆ ಖಂಡಿಸಿ ಗುರುವಾರ ಬೆಳಿಗ್ಗೆ ದಲಿತ ಸಂಘಟನೆಗಳ ಮುಖಂಡರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಬೇಕು, ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಐದು ದಿನಗಳೊಳಗೆ ಆರೋಪಿಗಳನ್ನು ಬಂಧಿಸಿ, ಬಹಿರಂಗವಾಗಿ ಕ್ಷಮೆಯಾಚನೆ ಮಾಡಿಸಬೇಕು ಹಾಗೂ ಅವರಿಂದಲೇ ಭಾವಚಿತ್ರಗಳನ್ನು ತೊಳೆಯಿಸಿ ಪೂಜೆ ಸಲ್ಲಿಸುವಂತೆ ಮಾಡಬೇಕು ಎಂದು ಗಡುವು ನೀಡಿದರು.

ಪ್ರತಿಭಟನೆಯಲ್ಲಿ ಗಾಳೆಪ್ಪ ಎಂ.ಡಿ., ಪ್ರಕಾಶ್ ದೊಡ್ಡಮನಿ, ದೇವಪ್ಪ ಶಹಾಪುರ, ಬಸವರಾಜ್ ನಡುವಲಮನಿ, ಯಲ್ಲಪ್ಪ ಹಳೆಮನಿ, ಕೆಂಚಪ್ಪ ಕುಕನಪಲ್ಲಿ, ಮರಿಯಪ್ಪ ದೊಡ್ಡಮನಿ, ನಿಂಗಪ್ಪ ಬೆಣಕಲ್, ಕರಿಯಪ್ಪ ಮಣ್ಣಿನವರ ಸೇರಿದಂತೆ ಹಲವರು ಭಾಗವಹಿಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ತಹಸೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ಸಂಧಾನ ಹಾಗೂ ಶಾಂತಿ ಸಭೆ ನಡೆಸಿ ಭಾವಚಿತ್ರಗಳ ಮೇಲಿದ್ದ ಸೆಗಣಿಯನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಹಾನಿಗೊಂಡ ಫಲಕವನ್ನು ಬದಲಿಸಿ ಹೊಸ ಭಾವಚಿತ್ರ ಅಳವಡಿಸಿ ಪೂಜೆ ಸಲ್ಲಿಸಲಾಯಿತು.

ಏಪ್ರಿಲ್ 20ರಂದು ಅಂಬೇಡ್ಕರ್ ಜಯಂತಿ ಆಚರಿಸಲು ಗ್ರಾಮದಲ್ಲಿ ತೀರ್ಮಾನಿಸಲಾಗಿದೆ. ತನಿಖೆ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸಂಘಟಕರು ಮನವಿ ಮಾಡಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡು ವಾತಾವರಣ ತಿಳಿ ಗೊಳಿಸಿದ್ದಾರೆ.

“ವಿರಾಪುರ ಗ್ರಾಮದಲ್ಲಿ ನಡೆದ ಘಟನೆ ಅಶಾಂತಿ ಸೃಷ್ಟಿಸುವ ಹಾಗೂ ದೊಂಬಿ–ಗಲಾಟೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ನಡೆದ ಕಿಡಿಗೇಡಿಗಳ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ಕೃತ್ಯಗಳು ಸಮಾಜದ ಶಾಂತಿ–ಸೌಹಾರ್ದತೆಗೆ ಧಕ್ಕೆ ತರುತ್ತವೆ.

ಇಂತಹ ಕಿಡಿಗೇಡಿಗಳನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಿ, ಜಾಮೀನು ರಹಿತ ಪ್ರಕರಣ ದಾಖಲಿಸಿ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ವಿದ್ಯಾರ್ಥಿ ಸಂಘಟನೆ, ಮಹಿಳಾ ಮುನ್ನಡೆ ಹಾಗೂ ಜನಶಕ್ತಿ ಒತ್ತಾಯಿಸುತ್ತವೆ. ಗ್ರಾಮದಲ್ಲಿ ಶಾಂತಿ ಹಾಗೂ ಸಹಬಾಳ್ವೆ ಕಾಪಾಡಬೇಕು. ಈ ಕುರಿತು ಜಿಲ್ಲಾ ಎಸ್.ಪಿ. ಅವರ ಗಮನಕ್ಕೆ ತಂದಿದ್ದೇನೆ. “

 – ಕರಿಯಪ್ಪ ಗುಡಿಮನಿ,ರಾಜ್ಯಾಧ್ಯಕ್ಷ, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ.

 

“ಈ ಘಟನೆ ಅತ್ಯಂತ ಖಂಡನೀಯವಾಗಿದ್ದು,ಅಂಬೇಡ್ಕರ್ ಸೇರಿದಂತೆ ಮಹನೀಯರ ಭಾವಚಿತ್ರಗಳಿಗೆ ಅವಮಾನ ಮಾಡಿರುವುದು ಯಾವುದೇ ರೀತಿಯಲ್ಲಿ ಸಹಿಸಲು ಸಾಧ್ಯವಿಲ್ಲ. ಕಿಡಿಗೇಡಿಗಳನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಶಾಂತಿ ಕದಡುವ ಯಾವುದೇ ಘಟನೆಗಳಿಗೆ ಅವಕಾಶ ನೀಡಬಾರದು” -ನಿಂಗಪ್ಪ ಜಿ. ಬೆಣಕಲ್, ಜಿಲ್ಲಾಧ್ಯಕ್ಷ, ಡಿಎಸ್ಎಸ್ ಅಂಬೇಡ್ಕರ್ ಧ್ವನಿ( ಕಾದ್ರೊಳ್ಳಿ ಬಣ)

 

“ಸ್ಥಳೀಯ ವ್ಯಕ್ತಿ ಪ್ರಕಾಶ್ ಅವರು ದೂರು ನೀಡಿದ್ದಾರೆ. ಅದರ ಹಿನ್ನೆಲೆಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1)(v) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಬಂಧಿಸಿ, ತನಿಖೆಗೆ ಒಳಪಡಿಸಲಾಗುವದು . ಜೊತೆಗೆ ಗ್ರಾಮದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶೀಘ್ರದಲ್ಲೇ ಶಾಂತಿ ಸಭೆ ಮಾಡಲಾಗುವುದು”

-ಮೌನೇಶ್ವರ ಮಾಲಿಪಾಟೀಲ್, ಸಿಪಿಐ ಯಲಬುರ್ಗಾ ವೃತ್ತ

 

“ಈ ಘಟನೆ ದುಃಖಕರವಾಗಿದ್ದು, ಈಗಾಗಲೇ ಮಾರ್ಚ್ 13ರಂದು ಸಾಮಾಜಿಕ ಜಾಗೃತಿ ಸಭೆ ನಡೆಸಲಾಗಿತ್ತು. ಆದಾಗ್ಯೂ ಇಂತಹ ಘಟನೆ ಮರುಕಳಿಸಿರುವುದು ಬೇಸರ ತಂದಿದೆ. ಘಟನೆಯ ಬಳಿಕ ಸ್ಥಳೀಯ ಮುಖಂಡರನ್ನು ಮನವೊಲಿಸಿ ಸಂಧಾನ ನಡೆಸಲಾಗಿದೆ. ಹಾನಿಗೊಳಗಾದ ಭಾವಚಿತ್ರದ ಫಲಕವನ್ನು ತೆರವುಗೊಳಿಸಿ ಹೊಸ ಫಲಕವನ್ನು ಅಳವಡಿಸಿ ಪೂಜೆ ಸಲ್ಲಿಸಲಾಗಿದೆ. ಗ್ರಾಮದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ಎಲ್ಲರೂ ಸಹಕರಿಸಬೇಕು”

-ಶಶಿಧರ ಸಕ್ರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ, ಯಲಬುರ್ಗಾ – ಕುಕನೂರ

ತಾ.ಪಂ. ಇಒ ಸಂತೋಷ ಪಾಟೀಲ್ ಬಿರಾದಾರ್, ತಹಸೀಲ್ದಾರ್ ಬಸವರಾಜ್ ಬೆಣ್ಣೆಶಿರೂರ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶಶಿಧರ ಸಕ್ರಿ ಸೇರಿದಂತೆ ಡಿವೈಎಸ್‌ಪಿ ಮತ್ತಣ್ಣ ಸರವಗೋಳ, ಬೇವೂರು ಠಾಣೆಯ ಪಿಎಸ್‌ಐ ಗುರುರಾಜ್ ಟಿ., ಕುಕನೂರು ಠಾಣೆಯ ಪಿಎಸ್‌ಐ ಎಸ್.ಪಿ. ನಾಯ್ಕ್ ಹಾಗೂ ಯಲಬುರ್ಗಾ ಪಿಎಸ್‌ಐ ವಿಜಯ ಪ್ರತಾಪ್ ಉಪಸ್ಥಿತರಿದ್ದರು.

ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.

Leave a Reply

error: Content is protected !!