LOCAL NEWS : ಈಜಲು ಹೋಗಿ ವಿದ್ಯಾರ್ಥಿ ಆಕಾಶ್ ಕೆರೆಯಲ್ಲಿ ಮುಳುಗಿ ಸಾವು!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ, ಏಪ್ರಿಲ್ 19 : ದದೇಗಲ್ ಸಮೀಪದ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಹಿರೇ ಮನ್ನಾಪುರ ಗ್ರಾಮದ ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಭಾನುವಾರ ನಡೆದಿದೆ.
ಬಿಸಿಲಿನ ತೀವ್ರತೆಯನ್ನು ತಾಳಲಾರದೇ ನಾಲ್ವರು ವಿದ್ಯಾರ್ಥಿಗಳು ಈಜಲು ತೆರಳಿದ್ದರು. ಈ ವೇಳೆ ಒಬ್ಬ ವಿದ್ಯಾರ್ಥಿಗೆ ಈಜು ಬರದೇ ಇರುವ ಕಾರಣ ಕೆರೆಯಲ್ಲಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ.
ನೀರಿನಲ್ಲಿ ಮುಳುಗಿದ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದು, ಬಳಿಕ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ವಿದ್ಯಾರ್ಥಿಯನ್ನು ಆಕಾಶ ಎಂದು ಗುರುತಿಸಲಾಗಿದೆ. ಆತ ಹಾಸ್ಟೆಲ್‌ನಲ್ಲಿ ವಾಸವಾಗಿದ್ದನು.
ಈ ಘಟನೆಗೆ ಹಾಸ್ಟೆಲ್ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ವಿದ್ಯಾರ್ಥಿಯ ಪಾಲಕರು ಆರೋಪಿಸಿದ್ದಾರೆ. ಸಮರ್ಪಕ ಮೇಲ್ವಿಚಾರಣೆ ಹಾಗೂ ಭದ್ರತಾ ಕ್ರಮಗಳ ಕೊರತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ದೂರಿದ್ದಾರೆ.
ಘಟನೆಯ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.