LOCAL NEWS : ವೀರಾಪುರದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಆರೋಪಿಗೆ ಕಠಿಣ ಶಿಕ್ಷೆ ನೀಡಲು ದಲಿತ ಮುಖಂಡರ ಆಗ್ರಹ!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಏ. 29 : ತಾಲ್ಲುಕಿನ ವೀರಾಪುರ ಗ್ರಾಮದಲ್ಲಿ ಏಪ್ರಿಲ್ 16ರಂದು ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಇತರೆ ಮಹನೀಯರ ಭಾವಚಿತ್ರಗಳಿಗೆ ಸೆಗಣಿ ಎರಚಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳು ಹಾಗೂ ಮುಖಂಡರು ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ನಿವಾಸಿ ಪ್ರಕಾಶ್ ದೊಡ್ಡಮನಿ ದೂರು ದಾಖಲಿಸಿದ್ದು, ಎಸ್‌ಸಿ–ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಬಳಿಕ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಲಿತ ಸಂಘಟನೆಯ ಮುಖಂಡ ಬಸವರಾಜ ನಡುವಲಮನಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಸ್ವಾಗತಾರ್ಹವಾದರೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು.
ಯಾವುದೇ ರೀತಿಯ ಜಾತಿ ತಾರತಮ್ಯ ಮಾಡದೇ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಜೊತೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ಹೇಳಿದರು.
ಇದಲ್ಲದೆ, ಈ ಘಟನೆಗೆ ಕಾರಣವಾದ ಇತರೆ ವ್ಯಕ್ತಿಗಳನ್ನೂ ಪತ್ತೆಹಚ್ಚಿ, ಇದರ ಹಿಂದೆ ಇರುವವರನ್ನು ಗುರುತಿಸಲು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಆರೋಪಿಯ ಹಿಂದೆ ಬಲವಾದ ಕಾಣದ ಕೈಗಳ ಕೈವಾಡ ಇದ್ದರೆ, ಅವುಗಳನ್ನು ಪತ್ತೆಹಚ್ಚಿ ಸಂಬಂಧಪಟ್ಟವರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಘಟನೆಯ ಪ್ರಮುಖ ಆರೋಪಿ ಅದೇ ಗ್ರಾಮದ ನಿವಾಸಿ ಶಿವಕುಮಾರ್ ರಾಮಣ್ಣ ಕಡೆಮನಿ (23) ಅವರನ್ನು ಏಪ್ರಿಲ್ 23ರಂದು ಪೊಲೀಸರು ಬಂಧಿಸಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ವಿಶ್ವಮಾನವತೆಯ ಪ್ರತೀಕವಾಗಿದ್ದು, ಬಸವೇಶ್ವರರು ಜಗಜ್ಯೋತಿ ಎಂದು ಖ್ಯಾತಿ ಪಡೆದ ಮಹನೀಯರು. ಇಂತಹ ಮಹನೀಯರ ಭಾವಚಿತ್ರಗಳಿಗೆ ಅವಮಾನ ಮಾಡುವುದು ಸಮಾಜದ ಮೌಲ್ಯಗಳಿಗೆ ಧಕ್ಕೆ ತರುವಂತದ್ದು. ಇಂತಹ ಕೃತ್ಯಗಳಿಗೆ ಉಗ್ರ ಶಿಕ್ಷೆ ನೀಡುವುದರ ಮೂಲಕ ಇತರರಿಗೆ ಎಚ್ಚರಿಕೆ ಸಂದೇಶ ನೀಡಬೇಕು ಎಂದು ಮುಖಂಡರು ಹೇಳಿದರು.
“ಮಹನೀಯರ ಭಾವಚಿತ್ರಗಳಿಗೆ ಅವಮಾನ ಮಾಡುವಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವುದರ ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.”
— ನೀಲಪ್ಪ ದೊಡ್ಡಮನಿ, ದಲಿತ ಯುವ ಮುಖಂಡ
“ಈ ಘಟನೆ ಕುರಿತು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು.”
— ಗಾಳೆಪ್ಪ ಎಂ.ಡಿ., ದಲಿತ ಮುಖಂಡ