KOPPAL NEWS : ಲಂಚ ಸ್ವೀಕಾರ: ಲೋಕಾಯುಕ್ತ ದಾಳಿ, ಗ್ರಾ. ಪಂ. ಕಾರ್ಯದರ್ಶಿ ಸೇರಿ ಮೂವರು ಬಂಧನ!
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ ಮೇ 06 : ರೂ. 75,000 ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಹಾಗೂ ದಿನಗೂಲಿ ನೌಕರರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ಕೋಳೂರು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಮರಿಯಪ್ಪ (59), ಬಿಲ್ ಕಲೆಕ್ಟರ್ ನಾಗರಾಜ (31) ಹಾಗೂ ದಿನಗೂಲಿ ನೌಕರ ಮಾರುತಿ (22) ಎಂದು ಗುರುತಿಸಲಾಗಿದೆ.
ದೂರುದಾರ ಎಂ. ಜ್ಞಾನೇಶ್ವರಯ್ಯ ಅವರು ನೀಡಿದ ದೂರಿನ ಮೇರೆಗೆ, ದದೇಗಲ್ ಗ್ರಾಮದ ರಿ.ಸಂ. 74/29ರಲ್ಲಿ ಇರುವ 8 ಗುಂಟೆ ಜಮೀನಿಗೆ ಭೂ ಪರಿವರ್ತನೆ ಮತ್ತು ವಿನ್ಯಾಸ ಅನುಮೋದನೆ ಬಳಿಕ ಪಂಚಾಯಿತಿ ಖಾತಾ ದಾಖಲೆ ಮಾಡಿ ಪಾರಂ ನಂ. 9-11 ನೀಡಲು ಆರೋಪಿಗಳು ರೂ. 75,000 ಲಂಚ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಲಂಚ ನೀಡಲು ಇಷ್ಟವಿಲ್ಲದ ದೂರುದಾರರು ಮೇ 5ರಂದು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಬುಧವಾರ ಬಲೆ ಬೀಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಸಿ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಲೋಕೇಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ತನಿಖಾಧಿಕಾರಿ ಚಂದ್ರಪ್ಪ (ಪಿಐ), ಇನ್ಸ್‌ಪೆಕ್ಟರ್‌ಗಳಾದ ಸುನೀಲ್ ಹಾಗೂ ಶೈಲಾ ಪಾಟೀಲ ಸೇರಿದಂತೆ ಸಿಬ್ಬಂದಿ ತಂಡದಲ್ಲಿ ಭಾಗವಹಿಸಿದ್ದರು.