You are currently viewing FLASH NEWS : ಗಂಗಾವತಿಯಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: 56,432 ಹುದ್ದೆಗಳ ನೇಮಕಾತಿಗೆ ಆಗ್ರಹ!

FLASH NEWS : ಗಂಗಾವತಿಯಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: 56,432 ಹುದ್ದೆಗಳ ನೇಮಕಾತಿಗೆ ಆಗ್ರಹ!

FLASH NEWS : ಗಂಗಾವತಿಯಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: 56,432 ಹುದ್ದೆಗಳ ನೇಮಕಾತಿಗೆ ಆಗ್ರಹ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಗಂಗಾವತಿ, ಮೇ 08 : ರಾಜ್ಯದಲ್ಲಿ ಖಾಲಿ ಇರುವ 56,432 ಸರ್ಕಾರಿ ಹುದ್ದೆಗಳಿಗೆ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಹಾಗೂ ಕೆಪಿಎಸ್‌ಸಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ಶುಕ್ರವಾರ ನಗರದ ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಬಳಿಕ ಉದ್ಯೋಗಾಕಾಂಕ್ಷಿಗಳು ಉಪತಹಶೀಲ್ದಾರ ಮಹಾಂತಗೌಡ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉದ್ಯೋಗಾಕಾಂಕ್ಷಿ ಹೋರಾಟ ಸಮಿತಿ ಸಂಚಾಲಕ ಶರಣು ಪಾಟೀಲ್ ಅವರು , “ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದ್ದರೂ ಐದು ತಿಂಗಳು ಕಳೆದರೂ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ಉದ್ಯೋಗಾಕಾಂಕ್ಷಿಗಳಲ್ಲಿ ಭ್ರಮನಿರಸನ ಉಂಟಾಗಿದೆ,” ಎಂದು ಆರೋಪಿಸಿದರು.

ಕೆಎಎಸ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಹಿಂದೆಯೂ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಆದ್ದರಿಂದ ಕೆಪಿಎಸ್‌ಸಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮುಂದಿನ ಎಲ್ಲ ನೇಮಕಾತಿಗಳನ್ನು ಪಾರದರ್ಶಕವಾಗಿ ನಡೆಸುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಒತ್ತಾಯಿಸಿದರು.

ಉದ್ಯೋಗಾಕಾಂಕ್ಷಿಗಳಾದ ಗ್ಯಾನೇಶ್ ಗಂಗಾವತಿ ಮತ್ತು ಬಸವರಾಜ್ ವಂಕಲಕುಂಟೆ ಮಾತನಾಡಿ, “ಸಾಮಾಜಿಕ ಜಾಲತಾಣಗಳಲ್ಲಿ ಭರವಸೆ ನೀಡುವುದನ್ನು ಬಿಟ್ಟು ಸರ್ಕಾರ ತಕ್ಷಣ ನೇಮಕಾತಿ ಅಧಿಸೂಚನೆ ಪ್ರಕಟಿಸಬೇಕು. ಸರ್ಕಾರ ನಮ್ಮ ಧ್ವನಿಗೆ ಸ್ಪಂದಿಸದಿದ್ದರೆ ಬಲಿಷ್ಠ ಹೋರಾಟಕ್ಕೆ ಇಳಿಯಲಾಗುವುದು,” ಎಂದರು.

ಪ್ರತಿಭಟನೆಯಲ್ಲಿ ಬಸವರಾಜು, ಗಣೇಶ್, ರವಿಕುಮಾರ್, ವೆಂಕಣ್ಣ, ಅಖಿಲ್ ಕುಮಾರ್, ಶ್ರೀನಿವಾಸ್, ಜ್ಯೋತಿ, ಸಂಜನಾ, ನೀಲಪ್ಪ, ಹನುಮೇಶ್, ಚಂದ್ರಶೇಖರ್, ಜಿ. ಮಂಜುನಾಥ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 -:ಪ್ರಮುಖ ಹಕ್ಕೊತ್ತಾಯಗಳು:-

>ಕೆಪಿಎಸ್‌ಸಿ ಸುಧಾರಣೆಗೆ ಪಿ.ಸಿ. ಹೋಟಾ ಸಮಿತಿ ವರದಿ ಜಾರಿಗೊಳಿಸಬೇಕು.

>ನೇಮಕಾತಿ ಪರೀಕ್ಷೆಗಳ ಅರ್ಜಿ ಶುಲ್ಕ ರದ್ದುಪಡಿಸಬೇಕು

>ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.

>ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.

>ಗಂಗಾವತಿಯ ಸಾರ್ವಜನಿಕ ಗ್ರಂಥಾಲಯಕ್ಕೆ ಮೂಲಭೂತ ಸೌಕರ್ಯ ಹೆಚ್ಚಿಸಬೇಕು.

“ಬಡ ಕುಟುಂಬಗಳಿಂದ ಬಂದಿರುವ ನಾವು ಉದ್ಯೋಗಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೇವೆ. ನಮ್ಮನ್ನು ಅರಿತುಕೊಂಡು ಸರ್ಕಾರ ಕೂಡಲೇ ನೇಮಕಾತಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ.”

 – ಆಂಜನೇಯ ರಾಂಪುರ, ಸ್ಪರ್ಧಾರ್ಥಿ.

Leave a Reply

error: Content is protected !!