FLASH NEWS : ಪ್ರಧಾನಿ ಮೋದಿ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ : ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಟೀಕೆ!
ಪ್ರಜವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ, ಮೇ 17 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರಾಜೀನಾಮೆ ಕೇಳುವ ನೈತಿಕತೆ ಶಾಸಕ ಬಸವರಾಜ ರಾಯರಡ್ಡಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ ಟೀಕಿಸಿದರು.
ಈ ಬಗ್ಗೆ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ರಾಜಿನಾಮೆ ಕೊಡುವುದರ ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮೊದಲು ರಾಜೀನಾಮೆ ನೀಡಲಿ ಎಂದು ತಿರುಗೇಟು ನೀಡಿದ್ದಾರೆ.
‘ಬೆಲೆ ಏರಿಕೆ ಹಾಗೂ ಆರ್ಥಿಕ ಸ್ಥಿತಿಗತಿ ವಿಚಾರವಾಗಿ ಮೋದಿ ಸರಕಾರವನ್ನು ಟೀಕಿಸುವ ಮೊದಲು ರಾಜ್ಯ ಸರಕಾರದ ವೈಫಲ್ಯ ಕಾಂಗ್ರೆಸ್ ನಾಯಕರು ಪರಿಶೀಲಿಸಬೇಕು. ಕಳೆದ ಮೂರು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಅಗತ್ಯ ವಸ್ತುಗಳಿಂದ ಹಿಡಿದು ವಿವಿಧ ಸೇವೆಗಳ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ವಿದ್ಯುತ್ ಪರಿವರ್ತಕಗಳ ಬೆಲೆ, ಸ್ಟಾಂಪ್ ಪೇಪರ್ ದರ, ಜಮೀನು ನೋಂದಣಿ ಶುಲ್ಕ, ವಿದ್ಯುತ್, ಹಾಲು, ನೀರು ಬಿಲ್ ಹಾಗೂ ಪೆಟ್ರೋಲ್ ಮೇಲಿನ ರಾಜ್ಯ ಸರಕಾರದ ಸುಂಕ ಎಲ್ಲವೂ ಹೆಚ್ಚಾಗಿದೆ ಎಂದು ದೂರಿದರು.
2021ರಲ್ಲಿ ಸಿದ್ದರಾಮಯ್ಯ ಅವರು ಪೆಟ್ರೋಲ್ ಮೇಲಿನ 10 ರೂ. ಸುಂಕ ಕಡಿತ ಮಾಡುವುದಾಗಿ ಟ್ವೀಟ್ ಮಾಡಿದ್ದರು.
ಈಗ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದು, ಅದನ್ನು ಜಾರಿಗೆ ತರಲಿ ಎಂದು ಗುಳಗಣ್ಣನವರ ಸವಾಲು ಹಾಕಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದೇ ಕಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕರು ತಾವೇ ಒಪ್ಪಿಕೊಂಡಿರುವುದನ್ನು ರಾಯರಡ್ಡಿ ಮರೆತಿರಬೇಕು, ರಾಜ್ಯ ಸರಕಾರದ ಸಾಲದ ಪ್ರಮಾಣ 6.42 ಲಕ್ಷ ಕೋಟಿಗೆ ರೂ. ತಲುಪಿದ್ದು, 2025-26ನೇ ಸಾಲಿನಲ್ಲಿ 1 ಲಕ್ಷ ಕೋಟಿ ರೂ. ಹಾಗೂ 2026-27ರಲ್ಲಿ 1.32 ಲಕ್ಷ ಕೋಟಿ ರೂ. ಸಾಲ ಪಡೆಯಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದೇ ರೀತಿ ಮುಂದುವರಿದರೆ ರಾಜ್ಯದ ಸಾಲ 10 ಲಕ್ಷ ಕೋಟಿ ರೂ. ಗೆ ತಲುಪುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ಜಾಗತಿಕ ಯುದ್ಧ ಪರಿಸ್ಥಿತಿಗಳು ಮತ್ತು ಪೆಟ್ರೋಲ್ ಬೆಲೆ ಏರಿಕೆಗೆ ಸಂಬಂಧವಿಲ್ಲ ಎಂಬ ರಾಯರಡ್ಡಿ ಅವರ ಹೇಳಿಕೆ ಪ್ರಶ್ನಿಸಿದ ಅವರು, ವಿಶ್ವ ಮಟ್ಟದ ಆರ್ಥಿಕ ಬಿಕ್ಕಟ್ಟುಗಳ ಪರಿಣಾಮ ಭಾರತ ಮೇಲೂ ಬೀಳುತ್ತದೆ. ಬೆಲೆಗಳಲ್ಲಿ ಏರಿಳಿತಗಳು ಸಹಜ ಎಂದು ಹೇಳಿದರು.
ಬಂಗಾರ ಖರೀದಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಜನರಿಗೆ ಅಗತ್ಯಕ್ಕಿಂತ ಹೆಚ್ಚು ಖರೀದಿ ಬೇಡ ಎಂದು ಮಾತ್ರ ಹೇಳಿದ್ದು, ಖರೀದಿಸಬೇಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಆರ್ಥಿಕವಾಗಿ ಸದೃಢವಾಗಿ ಬೆಳೆಯುತ್ತಿದ್ದು, ಯುಪಿಎ ಸರಕಾರದ ಅವಧಿಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಇಂದು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು. 2047ರೊಳಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿಸಲು ಮೋದಿ ಅವರು ಶ್ರಮಿಸುತ್ತಿದ್ದಾರೆ ಎಂದರು.
“ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಹಾಗೂ ಸಚಿವ ಸ್ಥಾನಕ್ಕಾಗಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ಸ್ಪರ್ಧೆ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಮೊದಲು ತಮ್ಮ ಆಡಳಿತದ ವೈಫಲ್ಯಗಳನ್ನು ಸರಿಪಡಿಸಿಕೊಳ್ಳಲಿ”