LOCAL NEWS : ಗುಡುಗು–ಸಿಡಿಲಿನ ಅಬ್ಬರಕ್ಕೆ ಎಮ್ಮೆ, ಎತ್ತು ಸಾವು; ಬೆಳೆಗಳಿಗೆ ಹಾನಿ!
PV ನ್ಯೂಸ್ ಡಿಜಿಟಲ್ :
ಯಲಬುರ್ಗಾ, ಮೇ 18 : ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಸಂಜೆ ಸುರಿದ ಭಾರೀ ಮಳೆ, ಬಿರುಗಾಳಿ ಹಾಗೂ ಗುಡುಗು–ಸಿಡಿಲಿನ ಅಬ್ಬರಕ್ಕೆ ಪ್ರತ್ಯೇಕ ಘಟನೆಗಳಲ್ಲಿ ಒಂದು ಎಮ್ಮೆ ಮತ್ತು ಒಂದು ಎತ್ತು ಮೃತಪಟ್ಟಿದ್ದು, ಹಲವೆಡೆ ಬೆಳೆಗಳಿಗೆ ಹಾನಿಯಾಗಿದೆ.
ಸಂಜೆ ಆರಂಭವಾದ ಮಳೆ ಮೊದಲು ಸಾಧಾರಣವಾಗಿ ಸುರಿದರೂ, ಬಳಿಕ ಬಿರುಗಾಳಿ ಹಾಗೂ ಸಿಡಿಲಿನ ಆರ್ಭಟದೊಂದಿಗೆ ತೀವ್ರಗೊಂಡಿತು.
ತಾಲೂಕಿನ ದಮ್ಮೂರು ಗ್ರಾಮದ ರೈತ ವಿರೂಪಣ್ಣ ಹಳ್ಳಿಕೇರಿ ಅವರಿಗೆ ಸೇರಿದ ಎಮ್ಮೆ ಸಿಡಿಲು ಬಡಿದು ಮೃತಪಟ್ಟಿದೆ. ಮತ್ತೊಂದು ಘಟನೆಯಲ್ಲಿ ಹಗೇದಾಳ ಗ್ರಾಮದ ನೀಲಪ್ಪ ಚೂರಿ ಅವರಿಗೆ ಸೇರಿದ ಎತ್ತು ಸಹ ಸಿಡಿಲಿನ ಪರಿಣಾಮ ಸಾವನ್ನಪ್ಪಿದೆ. ಈ ಘಟನೆಗಳಿಂದ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
ದಮ್ಮೂರು ಗ್ರಾಮದ ಅನೇಕ ರೈತರ ತೋಟಗಳಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಭಾರೀ ಗಾಳಿಗೆ ನೆಲಕ್ಕುರುಳಿವೆ. ಹೊರವಲಯದ ಮನೆಗಳಿಗೆ ಅಳವಡಿಸಿದ್ದ ತಗಡುಗಳು ಗಾಳಿಯ ಅಬ್ಬರಕ್ಕೆ ಹಾರಿ ಹೋಗಿವೆ.
ತಾಲೂಕಿನ ಮಾರನಾಳ ಗ್ರಾಮದ ಶಂಕ್ರಪ್ಪ ಗುಳಗುಳಿ ಅವರಿಗೆ ಸೇರಿದ ಎಲೆಬಳ್ಳಿ ತೋಟಕ್ಕೂ ಭಾರಿ ಹಾನಿಯಾಗಿದ್ದು, ಬೆಳೆ ಸಂಪೂರ್ಣ ನೆಲಕ್ಕುರುಳಿದೆ. ಆಸುಪಾಸಿನ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಯಲಬುರ್ಗಾ ಪಟ್ಟಣದ ಮಲ್ಕಸಮುದ್ರ ರಸ್ತೆಯಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಮರಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಸಾರ್ವಜನಿಕರು ಕತ್ತಲಿನಲ್ಲಿ ಕಾಲ ಕಳೆಯುವಂತಾಯಿತು.
ಮಾಹಿತಿ ತಿಳಿದು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಳೆ ಹಾಗೂ ಸಿಡಿಲಿನಿಂದ ಹಾನಿಗೊಳಗಾದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.