PV NEWS : ಬಂಜಾರ ಸಮುದಾಯಕ್ಕೆ ದ್ರೋಹ: ರುದ್ರಪ್ಪ ಲಮಾಣಿಯವರಿಗೆ ಡಿಸಿಎಂ ಅಥವಾ ಸಚಿವ ಸ್ಥಾನ ನೀಡಲು ಸುರೇಶ ಬಳೂಟಗಿ ಆಗ್ರಹ!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
PV ಡಿಜಿಟಲ್ ಡೆಸ್ಕ್, ಜೂ. 02 : ಸಾಮಾಜಿಕ ನ್ಯಾಯದ ಅಡಿಯಲ್ಲಿ ಬಂಜಾರ ಸಮುದಾಯದ ಏಕೈಕ ಶಾಸಕ ಹಾಗೂ ಹಾಲಿ ಉಪಸಭಾಪತಿ ಶ್ರೀ ರುದ್ರಪ್ಪ ಲಮಾಣಿಯವರಿಗೆ ಉಪ ಮುಖ್ಯಮಂತ್ರಿ ಅಥವಾ ಸಮಾಜ ಕಲ್ಯಾಣ ಸಚಿವ ಸ್ಥಾನ ನೀಡಬೇಕೆಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. “ಬಿಜೆಪಿ ಪಕ್ಷವು ಪ್ರತಿ ಚುನಾವಣೆಯಲ್ಲೂ ನಮ್ಮ ಬಂಜಾರ ಸಮಾಜದ 10 ರಿಂದ 12 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ, ಕನಿಷ್ಠ ಒಬ್ಬರು ಅಥವಾ ಇಬ್ಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯವನ್ನು ಗೌರವದಿಂದ ನಡೆಸಿಕೊಳ್ಳುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷವು ನಮ್ಮ ಸಮಾಜವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ” ಎಂದು ಆರೋಪಿಸಿದರು.
’ಮೂಗಿಗೆ ತುಪ್ಪ ಸವರುವ ಕೆಲಸ’
ಚುನಾವಣೆಯಲ್ಲಿ ಕೇವಲ ಮೂರ್ನಾಲ್ಕು ಟಿಕೆಟ್ ನೀಡಿ ಕಾಂಗ್ರೆಸ್ ನಮಗೆ ಮೋಸ ಮಾಡಿದೆ. ಸರ್ಕಾರ ರಚನೆಯ ಸಂದರ್ಭದಲ್ಲಿ ಸಮುದಾಯದ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವ ಸೌಜನ್ಯವನ್ನು ತೋರಿಲ್ಲ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವಿದ್ದಾಗ ರುದ್ರಪ್ಪ ಲಮಾಣಿಯವರನ್ನು ಉಪಸಭಾಪತಿ ಮಾಡುವ ಮೂಲಕ ಸಮುದಾಯದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಯಿತು. ನಮ್ಮ ಸಮಾಜವನ್ನು ಮರಳು ಮಾಡಿ ಅವರು ಮಾತ್ರ ಅಧಿಕಾರ ಅನುಭವಿಸಿದರು ಎಂದು ಬಳೂಟಗಿ ಕಿಡಿಕಾರಿದರು.
“ಈಗಲಾದರೂ ನೂತನ ಮುಖ್ಯಮಂತ್ರಿಗಳಾದ ಮಾನ್ಯ ಡಿ.ಕೆ. ಶಿವಕುಮಾರ್ ಅವರು ನಮ್ಮ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇರುವ ಏಕೈಕ ಶಾಸಕರಾದ ಶ್ರೀ ರುದ್ರಪ್ಪ ಲಮಾಣಿಯವರಿಗೆ ಉಪ ಮುಖ್ಯಮಂತ್ರಿ ಇಲ್ಲವೇ ಸಮಾಜ ಕಲ್ಯಾಣ ಸಚಿವ ಸ್ಥಾನದಂತಹ ಉನ್ನತ ಜವಾಬ್ದಾರಿಯನ್ನು ನೀಡಬೇಕು.”
— ಸುರೇಶ ಬಳೂಟಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಗೋರ ಸೇನಾ.
ಚುನಾವಣೆಯಲ್ಲಿ ಪಾಠ ಕಲಿಸುವ ಎಚ್ಚರಿಕೆ!
2023ರ ಚುನಾವಣೆಯಲ್ಲಿ ಬಂಜಾರ ಸಮುದಾಯವನ್ನು ಯಾಮಾರಿಸಿ ಭರ್ಜರಿ ಮತಗಳನ್ನು ಪಡೆದ ಕಾಂಗ್ರೆಸ್, ಒಳ ಮೀಸಲಾತಿ ವಿಷಯದಲ್ಲಿ ನಮಗೆ ದ್ರೋಹ ಬಗೆದಿದೆ. ಈಗಲಾದರೂ ನಮ್ಮ ಸಮುದಾಯದ ಮೇಲೆ ಗೌರವ ಇದ್ದರೆ ರುದ್ರಪ್ಪ ಲಮಾಣಿಯವರಿಗೆ ಒಳ್ಳೆಯ ಖಾತೆಯನ್ನು ನೀಡಬೇಕು. ಇಲ್ಲದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣ್ಣು ಮುಕ್ಕಿಸಲು ಬಂಜಾರ ಸಮಾಜ ಸಿದ್ಧವಾಗಿದೆ ಎಂದು ಅವರು ಇದೇ ವೇಳೆ ಖಡಕ್ ಎಚ್ಚರಿಕೆ ನೀಡಿದರು.