LOCAL NEWS : ಕುಕನೂರು | ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಪವರ್‌ಗ್ರಿಡ್ ಸಂಸ್ಥೆ ವಿರುದ್ಧ ಬೃಹತ್ ಹೋರಾಟಕ್ಕೆ ಸಜ್ಜಾದ ರೈತರು! : ಇದಕ್ಕೆ ತಹಶೀಲ್ದಾರ್ ಹೇಳಿದ್ದೇನು?
PV NEWS :
ಕುಕನೂರು, ಜೂನ್ 11 : ಗ್ರೀಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಪವರ್‌ಗ್ರಿಡ್) ಕಂಪನಿಯು ನಿಯಮಾವಳಿಗಳನ್ನು ಗಾಳಿಗೆ ತೂರಿ ಕೃಷಿ ಭೂಮಿಯಲ್ಲಿ ಹೈ-ಟೆನ್ಷನ್ (ಎಚ್.ಟಿ) ವಿದ್ಯುತ್ ಲೈನ್ ಅಳವಡಿಸುತ್ತಿರುವುದನ್ನು ಖಂಡಿಸಿ ಹಾಗೂ ಸೂಕ್ತ ಭೂಪರಿಹಾರಕ್ಕಾಗಿ ಆಗ್ರಹಿಸಿ ಕುಕನೂರು ತಾಲ್ಲೂಕಿನ ರೈತರು ನಾಳೆ 10 ಗಂಟೆಗೆ ತಾಲೂಕಿನ ಇಟಗಿ-ಮಸಬಹಂಚಿನಾಳ ನ ಶೇಖರಗೌಡ ಅಖಂಡಿರವರ ಹೊಲದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ನೊಂದ ರೈತರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ರೈತರ ಪ್ರಮುಖ ಆರೋಪ ಮತ್ತು ಬೇಡಿಕೆ :
1) ಫಲವತ್ತಾದ ಕೃಷಿ ಭೂಮಿಯ ಮಧ್ಯದಲ್ಲಿ ಬೃಹತ್ ವಿದ್ಯುತ್ ಕಂಬಗಳನ್ನು (ಟವರ್) ನಿಲ್ಲಿಸುತ್ತಿರುವುದರಿಂದ ಅಲಸಂಧಿ, ತೋಗರಿ, ಹೆಸರು ಬೆಳೆಗಳು ನಾಶವಾಗುತ್ತಿವೆ.
2) ಭವಿಷ್ಯದಲ್ಲಿ ಆ ಭಾಗದಲ್ಲಿ ಯಾವುದೇ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಯಾವುದೇ ಪೂರ್ವ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ.
3) ಕಡಿಮೆ ಪರಿಹಾರದ ಆಮಿಷ : ಪ್ರಸ್ತುತ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಪವರ್‌ಗ್ರಿಡ್ ಸಂಸ್ಥೆಯು ನೀಡುತ್ತಿರುವ ಪರಿಹಾರ ತೀರಾ ಅತ್ಯಲ್ಪವಾಗಿದೆ. ಇದು ರೈತರ ಬದುಕಿನ ಹಕ್ಕನ್ನು ಕಸಿದುಕೊಂಡಂತಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಶೇಖರಗೌಡ ಅಖಂಡಿ,“ಅಭಿವೃದ್ಧಿಯ ಹೆಸರಿನಲ್ಲಿ ಅನ್ನ ಕೊಡುವ ರೈತನನ್ನು ಬೀದಿಗೆ ತಳ್ಳಲಾಗುತ್ತಿದೆ. ಹೈ-ಟೆನ್ಷನ್ ಲೈನ್‌ಗಳಿಂದಾಗಿ ಭೂಮಿಯ ಮೌಲ್ಯ ಸಂಪೂರ್ಣ ಶೂನ್ಯವಾಗುತ್ತದೆ. ಕಂಪನಿ ಮತ್ತು ಅಧಿಕಾರಿಗಳು ಕೂಡಲೇ ಮಾರುಕಟ್ಟೆ ದರದಂತೆ ಯೋಗ್ಯ ಪರಿಹಾರ ನೀಡಬೇಕು ಮತ್ತು ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಎಚ್ಚರಿಸಿದರು.
ನ್ಯಾಯ ಸಿಗುವವರೆಗೂ ವಿದ್ಯುತ್ ಲೈನ್ ಕಾಮಗಾರಿಯನ್ನು ಮುಂದುವರಿಸಲು ಬಿಡುವುದಿಲ್ಲ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ರೈತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕುಕನೂರು ತಾಲ್ಲೂಕಿನ ನೊಂದ ಭೂಮಾಲೀಕರಾದ ಶೇಖರಗೌಡ ಅಖಂಡಿ, ಪ್ರಭು ಆಛಾರ್ ಉಮೇಶ್ ವಿರಾಪುರ್, ವೀರೇಶ್ ಬೆನಕಲ್, ಗುರುಲಿಂಗಯ್ಯ ಕಲ್ಲ ಗಡಗಿ, ಮುತ್ತು ಹಳ್ಳಿ, ಬಸನಗೌಡ ಮುದ್ದಾಬಳ್ಳಿ, ಯಂಕಪ್ಪ ಲಮಾಣಿ, ಮಹೇಶ್ ಅಖಂಡಿ ಸೇರಿದಂತೆ ರೈತ ಮುಖಂಡ ಅಂದಪ್ಪ ಹುರಳಿ ಉಪಸ್ಥಿತರಿದ್ದರು.
“ಪವರ್‌ಗ್ರಿಡ್ ಸಂಸ್ಥೆಯ ಹೈ-ಟೆನ್ಷನ್ ವಿದ್ಯುತ್ ಲೈನ್ ಅಳವಡಿಕೆಯ ಕೆಲಸಗಳು ನಿಯಮಾನುಸಾರ ನಡೆಯುತ್ತಿದ್ದು, ಆ ಕೆಲಸವನ್ನು ಯಾರೂ ಸ್ಥಗಿತಗೊಳಿಸಲು (ಸ್ಟಾಪ್ ಮಾಡಲು) ಬರುವುದಿಲ್ಲ. ಪ್ರತಿಭಟನೆಗೆ ಯಾವುದೇ ಅವಕಾಶ ನೀಡುವುದಿಲ್ಲ ಮತ್ತು ಈ ಕುರಿತು ಪೊಲೀಸ್ ಇಲಾಖೆಯ (ಪಿ.ಎಸ್.ಐ) ಜೊತೆ ಮಾತನಾಡಲಾಗುವುದು. ಸಂಸ್ಥೆಯವರು ಸರ್ಕಾರದ ಆದೇಶ ಮತ್ತು ನಿಯಮಾವಳಿಗಳ ಅನ್ವಯವೇ ರೈತರಿಗೆ ಯೋಗ್ಯವಾದ ಭೂಪರಿಹಾರದ ಹಣವನ್ನು ಪಾವತಿಸುತ್ತಿದ್ದಾರೆ. ಆದಾಗ್ಯೂ ರೈತರಿಗೆ ಅನ್ಯಾಯವಾಗಿದ್ದರೆ, ಪರಿಶೀಲನೆ ಮಾಡುತ್ತೇನೆ”