You are currently viewing LOCAL BREAKING : ಪವರ್‌ಗ್ರಿಡ್‌ನ ಕಂಪನಿ ವಿರುದ್ಧ ರೈತರ ಆಕ್ರೋಶ ! : ಇಟಗಿ-ಮಸಬಹಂಚಿನಾಳ ರಸ್ತೆಯಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭ!

LOCAL BREAKING : ಪವರ್‌ಗ್ರಿಡ್‌ನ ಕಂಪನಿ ವಿರುದ್ಧ ರೈತರ ಆಕ್ರೋಶ ! : ಇಟಗಿ-ಮಸಬಹಂಚಿನಾಳ ರಸ್ತೆಯಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭ!

LOCAL BREAKING : ಪವರ್‌ಗ್ರಿಡ್‌ನ ಕಂಪನಿ ವಿರುದ್ಧ ರೈತರ ಆಕ್ರೋಶ ! : ಇಟಗಿ-ಮಸಬಹಂಚಿನಾಳ ರಸ್ತೆಯಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭ!

 

PV NEWS: 

​ಕೊಪ್ಪಳ, ಜೂನ್‌ 12 : ಕುಕನೂರು-ಯಲಬುರ್ಗಾ ಅವಳಿ ತಾಲೂಕುಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಪವರ್‌ಗ್ರಿಡ್ ಯೋಜನೆಯಿಂದ ರೈತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ಗದಗದ ಕೊಪ್ಪಳ ಟ್ರಾನ್ಸ್‌ಮಿಷನ್ ಲಿಮಿಟೆಡ್ ಕಂಪನಿ ವಿರುದ್ಧ ರೈತರು ಇಂದಿನಿಂದ (ಶುಕ್ರವಾರ, ಜೂ.12) ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.  ಇಟಗಿ-ಮಸಬಹಂಚಿನಾಳ ರಸ್ತೆಯ ಸರ್ವೆ ನಂಬರ್ 87ರ ಜಮೀನಿನ ಪಕ್ಕದಲ್ಲಿ ಈ ಬೃಹತ್ ಶಾಂತಿಯುತ ಪ್ರತಿಭಟನೆ ಆರಂಭವಾಗಿದೆ.

 

​ರಾಜ್ಯ ರೈತ ಸಂಘದ ತಾಲೂಕು ಸದಸ್ಯರ ನೇತೃತ್ವದಲ್ಲಿ ಆಯೋಜಿತವಾಗಿರುವ ಈ ಹೋರಾಟಕ್ಕೆ ಇಟಗಿ-ಮಸಬಹಂಚಿನಾಳ, ಗಾವರಾಳ, ಮನ್ನಾಪುರ, ಮಾಳೇಕೊಪ್ಪ ಹಾಗೂ ಬನ್ನಿಕೊಪ್ಪ ಗ್ರಾಮಗಳ ರೈತಾಪಿ ವರ್ಗದವರು ಜೊತೆಗೆ ಭಾದಿತ ರೈತರು ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.

 ​ಜಿಲ್ಲಾಧಿಕಾರಿಗಳಿಗೆ ಮನವಿ : ರೈತರ ಪ್ರಮುಖ ಬೇಡಿಕೆಗಳು

​ಪವರ್‌ಗ್ರಿಡ್ ಯೋಜನೆಯಿಂದ ಬಾಧಿತರಾದ ರೈತರು ಕೊಪ್ಪಳದ  ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿಯೊಂದನ್ನು ಸಲ್ಲಿಸಿದ್ದು, ತಮ್ಮ ಮೇಲಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ರೈತರು ಮಂಡಿಸಿರುವ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ:

1) ಪರಿಹಾರ ವಿತರಣೆಯಲ್ಲಿ ತಾರತಮ್ಯ ನಿವಾರಣೆ: ಜಿ ಲ್ಲಾವಾರು ವಿದ್ಯುತ್ ಟವರ್ ನಿರ್ಮಾಣದ ಸಂದರ್ಭದಲ್ಲಿ ಹಣ ವಿತರಣೆ ಮಾಡುವಲ್ಲಿ ಆಗಿರುವ ತಾರತಮ್ಯಗಳನ್ನು ತಕ್ಷಣವೇ ಸರಿಪಡಿಸಬೇಕು.

​2) ವೈಜ್ಞಾನಿಕ ಮೌಲ್ಯಮಾಪನ: ವಿದ್ಯುತ್ ಲೈನ್ ಹಾದುಹೋಗುವ ಕಾರಿಡಾರ್ ಕೆಳಗೆ ಬರುವ ನಿಡಮರಗಳು ಹಾಗೂ ತೋಟಗಾರಿಕೆ ಬೆಳೆಗಳ ಹಾನಿಗೆ ಸೂಕ್ತ ಪರಿಹಾರ ನಿಗದಿಪಡಿಸಲು ಸಂಬಂಧಪಟ್ಟ ಇಲಾಖೆಯು ನಿಖರ ಮೌಲ್ಯಮಾಪನ ಮಾಡಿಸಿ, ನ್ಯಾಯಯುತ ದರ ನಿಗದಿಪಡಿಸಬೇಕು.

​3) ವಿವಿಧ ಬೆಳೆಗಳಿಗೆ ಪರಿಹಾರ: ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಶ್ರೀಗಂಧ, ತೆಂಗು, ಪೇರಲ, ಕರಿಬೇವು, ನುಗ್ಗೆ ಹಾಗೂ ಇತರೆ ಬಹುವಾರ್ಷಿಕ ಬೆಳೆಗಳಿಗೆ ಮತ್ತು ಬೀಜ ಉತ್ಪಾದನಾ ಬೆಳೆಗಳಾದ ಹತ್ತಿ, ಕಲ್ಲಂಗಡಿ, ಕುಂಬಳ, ಮೆಣಸಿನಕಾಯಿ ಮುಂತಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು.

4) ​ಆಸ್ತಿಪಾಸ್ತಿ ಹಾನಿಗೆ ಪರಿಹಾರ: ಯೋಜನೆಯಿಂದಾಗಿ ಹಾನಿಗೊಳಗಾಗುವ ರೈತರ ಬೋರ್‌ವೆಲ್, ಬಾವಿ, ದನದ ಕೊಟ್ಟಿಗೆ, ರೈತರ ಪರಿಕರ ಸಂಗ್ರಹ ರೂಮ್ ಹಾಗೂ ನೀರು ಸಂಗ್ರಹಣಾ ತೊಟ್ಟಿಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು.

​5) ಜೀವವಿಮೆ ಸೌಲಭ್ಯ: ಪವರ್ ಗ್ರಿಡ್ ವಿದ್ಯುತ್ ಸರಬರಾಜು ಲೈನ್ ಕೆಳಗಿನ ರೈತರ ಜಮೀನುಗಳಲ್ಲಿ ಕೆಲಸ ಮಾಡುವಾಗ ಜೀವಕ್ಕೆ ಅಪಾಯ ಉಂಟಾಗುವ ಸಂಭವವಿರುವುದರಿಂದ, ಕಾರಿಡಾರ್ ಲೈನ್ ಕೆಳಗೆ ಬರುವ ರೈತರಿಗೆ ಕಡ್ಡಾಯವಾಗಿ 2 ಕೋಟಿ ರೂಪಾಯಿಗಳ ಜೀವವಿಮೆ ಸೌಲಭ್ಯವನ್ನು ಕಂಪನಿಯು ಒದಗಿಸಬೇಕು.

ರೈತ ಮುಖಂಡರ ಅಧಿಕೃತ ಜಂಟಿ ಹೇಳಿಕೆ..!

​”ಗದಗ್-ಕೊಪ್ಪಳ ಟ್ರಾನ್ಸ್‌ಮಿಷನ್ ಲಿಮಿಟೆಡ್ ಕಂಪನಿಯ ದೌರ್ಜನ್ಯ ಮತ್ತು ದ್ವಂದ್ವ ನೀತಿಯ ವಿರುದ್ಧ ನಮ್ಮ ಹೋರಾಟ ಇಂದಿನಿಂದ ಆರ್‌ಪಾರ್ ಹಂತಕ್ಕೆ ತಲುಪಿದೆ. ನಮ್ಮ ಜಮೀನುಗಳನ್ನು ಕಿತ್ತುಕೊಂಡು, ನಮ್ಮ ಬದುಕನ್ನು ಬೀದಿಗೆ ತಳ್ಳಲು ಹೊರಟಿರುವ ಕಂಪನಿಯ ನಡೆಗೆ ನಮ್ಮ ತೀವ್ರ ಧಿಕ್ಕಾರವಿದೆ. ಒಂದೇ ಯೋಜನೆ, ಒಂದೇ ರೀತಿಯ ಟವರ್‌ಗಳಿದ್ದರೂ ಬೇರೆ ಜಿಲ್ಲೆಗಳಿಗೆ ಒಂದು ದರ, ನಮ್ಮ ಕೊಪ್ಪಳದ ರೈತರಿಗೆ ಅತ್ಯಂತ ಕಡಿಮೆ ದರ ನೀಡಿ ತಾರತಮ್ಯ ಮಾಡಲಾಗುತ್ತಿದೆ. ಈ ಅನ್ಯಾಯ ನಿಲ್ಲಬೇಕು, ಎಲ್ಲರಿಗೂ ಸಮಾನ ಪರಿಹಾರ ಸಿಗಲೇಬೇಕು”

:- ಶೇಖರಗೌಡ ಅಕ್ಕಂಡಿ, ಬಾಧಿತ ರೈತ. ಇಟಗಿ ಗ್ರಾಮ.

“ನಮ್ಮ ಜಮೀನಿನಲ್ಲಿರುವ ಶ್ರೀಗಂಧ, ದಾಳಿಂಬೆ, ತೆಂಗು, ಕರಿಬೇವು ಮುಂತಾದ ತೋಟಗಾರಿಕಾ ಬೆಳೆಗಳು ಹಾಗೂ ಹತ್ತಿ, ಕಲ್ಲಂಗಡಿಯಂತಹ ಬೀಜೋತ್ಪಾದನಾ ಬೆಳೆಗಳಿಗೆ ಕಂಪನಿ ನಿಗದಿಪಡಿಸಿದ ಏಕಪಕ್ಷೀಯ ದರ ನಮಗೆ ಒಪ್ಪಿಗೆಯಿಲ್ಲ. ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಿಂದ ವೈಜ್ಞಾನಿಕ ಮೌಲ್ಯಮಾಪನ ಮಾಡಿಸಿ, ಸೂಕ್ತ ಮಾರುಕಟ್ಟೆ ದರ ನೀಡಬೇಕು”

 “ಕಾಮಗಾರಿಯಿಂದ ಧ್ವಂಸಗೊಳ್ಳುತ್ತಿರುವ ನಮ್ಮ ಬೋರ್‌ವೆಲ್, ತೆರೆದ ಬಾವಿ, ದನದ ಕೊಟ್ಟಿಗೆ ಹಾಗೂ ನೀರು ಸಂಗ್ರಹಣಾ ತೊಟ್ಟಿಗಳಿಗೆ ಸಂಪೂರ್ಣ ಪರಿಹಾರ ಒದಗಿಸಬೇಕು”

:- ಪ್ರಭು ಆಚಾರ್‌, ರೈತ ಮುಖಂಡ – ಮಸಬಹಂಚಿನಾಳ ಗ್ರಾಮ.

 

​”₹2 ಕೋಟಿ ಜೀವವಿಮೆ ಕಡ್ಡಾಯ: 400KV ಗಿಂತಲೂ ಹೆಚ್ಚಿನ ಸಾಮರ್ಥ್ಯದ ಲೈನ್‌ಗಳ ಕೆಳಗೆ ನಾವು ಜೀವದ ಹಂಗು ತೊರೆದು ಕೃಷಿ ಮಾಡಬೇಕಿದೆ. ಭವಿಷ್ಯದ ಸುರಕ್ಷತೆಗಾಗಿ ಕಾರಿಡಾರ್ ವ್ಯಾಪ್ತಿಯ ಪ್ರತಿ ರೈತ ಕುಟುಂಬಕ್ಕೆ ಕಂಪನಿಯೇ ₹2 ಕೋಟಿ ಮೊತ್ತದ ಜೀವವಿಮೆ ಮಾಡಿಸಿಕೊಡಬೇಕು”

:- ಮೆಹಬೂಬ್‌ ಮಾಳೆಕೋಪ್ಪ, ಕುಕನೂರು . 

​ಕಂಪನಿ ಮತ್ತು ಸರ್ಕಾರಕ್ಕೆ ರೈತರಿಂದ ನೇರ ಎಚ್ಚರಿಕೆ..!

“ನಾವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ಸಹಾಯಕ ಆಯುಕ್ತರಿಗೆ ಮತ್ತು ತಹಶೀಲ್ದಾರರಿಗೆ ಲಿಖಿತ ಮನವಿ ಸಲ್ಲಿಸಿದ್ದೇವೆ. ಎಲ್ಲಿಯವರೆಗೆ ಕಂಪನಿಯು ನಮ್ಮೊಂದಿಗೆ ನೇರ ಮಾತುಕತೆ ನಡೆಸಿ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ಈ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ.  ಯಲಬುರ್ಗಾ-ಕುಕನೂರು ಅವಳಿ ತಾಲೂಕಿನ ಸಮಸ್ತ ರೈತ ಬಾಂಧವರು ಪಕ್ಷಾತೀತವಾಗಿ ಈ ಹೋರಾಟಕ್ಕೆ ಕೈಜೋಡಿಸಬೇಕು” ಎಂದು ರೈತ ಮುಖಂಡ ಅಂದಪ್ಪ ಹುರಳಿ ಹಾಗೂ ಬಾಧಿತ ರೈತರ ಒಕ್ಕೂಟದ ಮಾತುಗಳಾಗಿವೆ.

ಈ ಸಂದರ್ಭದಲ್ಲಿ ಪ್ರಗತಿಪರ ರೈತ ಶರಣಪ್ಪ ಗುಂಗಾಡಿಯವರು ರೈತರ ಹೋರಾಟಕ್ಕೆ ಬೆಂಬಲ ನೀಡಿದರು. ಸಂಜೀವಪ್ಪ ಸಂಘಟಿ, ಉಮೇಶ್ ವೀರಾಪುರ, ವೀರೇಶ, ರೈತ ಮಹಿಳೆಯರಾದ ಹುಲಿಗೆಮ್ಮ, ದುರ್ಗಮ್ಮ, ದೇವಕ್ಕ ಪೂಜಾರಿ, ಬಸವ ಸಿಂದೋಗಿ, ಲಕ್ಷ್ಮವ್ವ, ರುದ್ರಪ್ಪ ಬೆನ್ನಳ್ಳಿ, ಹೇಮಣ್ಣ ಯರಾಸಿ, ಪ್ರಭುಗೌಡ ಪಾಟೀಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!