ಕೊಪ್ಪಳ, ಜೂನ್ 24 : ತುಂಗಭದ್ರಾ ಜಲಾನಯನ ಪ್ರದೇಶದ ರೈತರು ಹಾಗೂ ಜನತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಹಿಸುದ್ದಿ ನೀಡಿದ್ದಾರೆ. ಕಳೆದ ವರ್ಷ ತಾಂತ್ರಿಕ ಸಮಸ್ಯೆಯಿಂದಾಗಿ ಆತಂಕ ಸೃಷ್ಟಿಸಿದ್ದ ತುಂಗಭದ್ರಾ ಜಲಾಶಯದ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದ್ದು, ಇದೀಗ ಅಣೆಕಟ್ಟಿನ ಎಲ್ಲಾ 33 ಗೇಟುಗಳಿಗೆ ಹೊಸ ಗೇಟ್‌ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜೂನ್ 25ರಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ.
ಐತಿಹಾಸಿಕ ಸಾಧನೆಗೆ ಸಾಕ್ಷಿಯಾದ ಜಲಾಶಯ..!!
ಕಳೆದ ವರ್ಷ ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿಹೋದಾಗ ರಾಜ್ಯ ಸರ್ಕಾರವು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿತ್ತು. ಕೇವಲ 6 ದಿನಗಳ ದಾಖಲೆ ಅವಧಿಯಲ್ಲಿ ಹೊಸ ಸ್ಟಾಪ್‌ಲಾಗ್ ಗೇಟ್ ಅಳವಡಿಸುವ ಮೂಲಕ ಕೋಟ್ಯಂತರ ಟಿಎಂಸಿ ನೀರು ಪೋಲಾಗದಂತೆ ತಡೆದು, ರೈತರ ಹಿತ ಕಾಯಲಾಗಿತ್ತು. ಅಂದೇ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಂಕಲ್ಪ ಮಾಡಿದ್ದ ಸರ್ಕಾರ, ಈಗ ಜಲಾಶಯದ ಎಲ್ಲಾ 33 ಗೇಟುಗಳನ್ನು ಸಂಪೂರ್ಣವಾಗಿ ನವೀಕರಿಸುವಲ್ಲಿ ಯಶಸ್ವಿಯಾಗಿದೆ.
ಮೂರು ರಾಜ್ಯಗಳ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ..!!
ಜೂನ್ 25ರಂದು ನಡೆಯಲಿರುವ ಈ ಐತಿಹಾಸಿಕ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ನೆರೆಯ ರಾಜ್ಯಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಕೇಂದ್ರ ಸಚಿವರು: ಸಿ.ಆರ್. ಪಾಟೀಲ್ ಆಂಧ್ರಪ್ರದೇಶದ ಮುಖ್ಯಮಂತ್ರಿ: ಎನ್. ಚಂದ್ರಬಾಬು ನಾಯ್ಡು ತೆಲಂಗಾಣದ ಮುಖ್ಯಮಂತ್ರಿ : ಎ. ರೇವಂತ್ ರೆಡ್ಡಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಗಣ್ಯರ ಜೊತೆಗೂಡಿ ಹೊಸ ಗೇಟ್‌ಗಳನ್ನು ಜನಾರ್ಪಣೆ ಮಾಡಲಿದ್ದಾರೆ.
”ಮುಂದಿನ ತಲೆಮಾರಿಗೂ ಜಲದ ಆಸರೆ”
“ಲಕ್ಷಾಂತರ ರೈತರ ಜಮೀನುಗಳಿಗೆ ನೀರಿನ ಆಸರೆಯಾಗಿರುವ, ಕೋಟ್ಯಂತರ ಜೀವಗಳಿಗೆ ಜೀವಜಲವುಣಿಸುತ್ತಿರುವ ತುಂಗಭದ್ರಾ ಜಲಾಶಯ ನಮ್ಮ ಹಿರಿಯರಿಂದ ಬಂದ ಬಳುವಳಿ. ಅದನ್ನು ಸುಸ್ಥಿತಿಯಲ್ಲಿಟ್ಟು, ಮುಂದಿನ ತಲೆಮಾರುಗಳಿಗೂ ಅದರ ಲಾಭ ದಕ್ಕುವಂತೆ ಮಾಡುವುದು ನಮ್ಮ ಕರ್ತವ್ಯ. ಈ ಯೋಜನೆಯೂ ನಿಮ್ಮದೇ, ಕಾರ್ಯಕ್ರಮವೂ ನಿಮ್ಮದೇ. ನಿಮ್ಮೆಲ್ಲರ ಶುಭ ಹಾರೈಕೆ ನಮ್ಮೊಂದಿಗಿರಲಿ.”
— ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ
ರೈತ ವಲಯದಲ್ಲಿ ಹರ್ಷ…!
ತುಂಗಭದ್ರಾ ಅಣೆಕಟ್ಟಿನ ಗೇಟುಗಳ ಆಧುನೀಕರಣದಿಂದಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಭಾಗದ ಲಕ್ಷಾಂತರ ರೈತರ ಕೃಷಿ ಭೂಮಿಗೆ ನೀರಿನ ಭದ್ರತೆ ಸಿಕ್ಕಂತಾಗಿದೆ. ಸರ್ಕಾರದ ಈ ಶ್ರದ್ಧೆ ಹಾಗೂ ಶೀಘ್ರ ಕಾರ್ಯಾಚರಣೆಗೆ ಜಲಾನಯನ ಪ್ರದೇಶದ ಸಾರ್ವಜನಿಕರು ಮತ್ತು ರೈತ ವಲಯದಿಂದ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.