ಬೆಂಗಳೂರು, ಆ. 7: ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಆಡಳಿತ), ಕೊಪ್ಪಳ ಜಿಲ್ಲೆಯ ಡಿಡಿಪಿಐ ಆಗಿರುವ ಸೋಮಶೇಖರಗೌಡ ಪಾಟೀಲ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶದಂತೆ, ಸೋಮಶೇಖರಗೌಡ ಪಾಟೀಲ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಉಪ ನಿರ್ದೇಶಕರು (ಯೋಜನೆ), ಬೆಂಗಳೂರು ನಗರ ಹುದ್ದೆಗೆ, ವಿ.ಆರ್. ರವಿಕುಮಾರ್ ಅವರ ಖಾಲಿ ಸ್ಥಾನಕ್ಕೆ ನಿಯೋಜಿಸಲಾಗಿದೆ. ಈ ವರ್ಗಾವಣೆ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ.
ಇದೇ ಆದೇಶದಲ್ಲಿ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 68ರ ಅನ್ವಯ ಕೆಲವು ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರವನ್ನೂ ವಹಿಸಲಾಗಿದೆ.
ಅದರಂತೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಕೊಪ್ಪಳದ ಪ್ರಾಂಶುಪಾಲ ಎ.ಎಸ್. ಅನಂತಕುಮಾರ್ ಅವರಿಗೆ ಕೊಪ್ಪಳ ಜಿಲ್ಲೆಯ ಉಪ ನಿರ್ದೇಶಕರು (ಅಭಿವೃದ್ಧಿ) ಹುದ್ದೆಯ ಹೆಚ್ಚುವರಿ ಪ್ರಭಾರ ನೀಡಲಾಗಿದೆ.
ಅದೇ ರೀತಿ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕಲ್ಯಾಣ ನಿಧಿಯ ಉಪ ನಿರ್ದೇಶಕರು ಮತ್ತು ಪ್ರಚಾರಾಧಿಕಾರಿ ಎಂ.ಎನ್. ಚಂದನ್ ಅವರಿಗೆ ಶಾಲಾ ಶಿಕ್ಷಣ ಇಲಾಖೆಯ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಶಾಖೆಯ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ಪುನರ್‌ವ್ಯವಸ್ಥೆಯ ಭಾಗವಾಗಿ ಈ ವರ್ಗಾವಣೆ ಹಾಗೂ ಹೆಚ್ಚುವರಿ ಪ್ರಭಾರದ ಆದೇಶಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.