PV NEWS : ಅಲ್ಪಸಂಖ್ಯಾತರ ವಿವಿಧ ಸಾಲ, ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನ!
PV NEWS ಕನ್ನಡ 24×7:
ಕೊಪ್ಪಳ, ಆ.28: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2026–27ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಸಾಲ ಹಾಗೂ ಸಹಾಯಧನ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಆಗಸ್ಟ್ 18ರಿಂದ ಸೆಪ್ಟೆಂಬರ್ 17ರವರೆಗೆ ನಿಗಮದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರಿವು (ವಿದ್ಯಾಭ್ಯಾಸ ಸಾಲ), ಸ್ವಾಲಂಬಿ ಸಾರಥಿ, ಶ್ರಮಶಕ್ತಿ ಸಾಲ, ವೃತ್ತಿ ಪ್ರೋತ್ಸಾಹ ಸಾಲ, ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ, ಗಂಗಾ ಕಲ್ಯಾಣದ ವೈಯಕ್ತಿಕ ಕೊಳವೆ ಬಾವಿ ಹಾಗೂ ಎತ್ತ ನೀರಾವರಿ ಯೋಜನೆ, ನವೋದಯ, ಫಾಸ್ಟ್‌ಫುಡ್ ಟ್ರಕ್/ಟ್ರೇಲರ್ ಕಿಚನ್ ಪ್ಯಾಡ್ (ಕಿಯೋಸ್ಕ್), ಮಹಿಳಾ ಸ್ವ–ಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಪ್ರೋತ್ಸಾಹ, ಸಿಬ್ಬಿಲಿಗಾರ ಸಮುದಾಯದ ಆರ್ಥಿಕ ಸಬಲೀಕರಣ, ಸಮುದಾಯ ಆಧಾರಿತ ತರಬೇತಿ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಸಾಲ, ವ್ಯಾಪಾರ–ಉದ್ಯಮಗಳಿಗೆ ನೇರಸಾಲ ಹಾಗೂ ಸಾಂತ್ವನ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಆನ್‌ಲೈನ್ ಅರ್ಜಿಯೇ ಕಡ್ಡಾಯ: ಆಸಕ್ತರು kmdconline.karnataka.gov.in ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅದರ ನಕಲು ಪ್ರತಿ ಅಥವಾ ದಾಖಲಾತಿಗಳ ಹಾರ್ಡ್‌ಕಾಪಿಯನ್ನು ಜಿಲ್ಲಾ ಕಚೇರಿಗೆ ಸಲ್ಲಿಸುವ ಅಗತ್ಯವಿಲ್ಲ. ಜಿಲ್ಲಾ ಕಚೇರಿಯಲ್ಲಿ ಯಾವುದೇ ಭೌತಿಕ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ನಿಗಮ ತಿಳಿಸಿದೆ.
ಸಾಲ ಮತ್ತು ಸಹಾಯಧನ ಯೋಜನೆಗಳ ಮೂಲಕ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ, ಯುವಜನರಿಗೆ ಸ್ವಯಂ ಉದ್ಯೋಗ, ಸಣ್ಣ ವ್ಯಾಪಾರ–ಉದ್ಯಮ ಹಾಗೂ ಮಹಿಳಾ ಸ್ವ–ಸಹಾಯ ಗುಂಪುಗಳಿಗೆ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ನೆರವು ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಮೌಲಾನಾ ಆಜಾದ್ ಭವನದ ಮೊದಲ ಮಹಡಿಯಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬಹುದು. 08539–225008 ದೂರವಾಣಿ ಸಂಖ್ಯೆ ಹಾಗೂ kmdckpl@gmail.com ಇ–ಮೇಲ್ ಮೂಲಕವೂ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.