LOCAL EXPRESS : ಜೆಜೆಎಂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

You are currently viewing LOCAL EXPRESS : ಜೆಜೆಎಂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

ಕೊಪ್ಪಳ : ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರ ಸಮ್ಮುಖದಲ್ಲಿ ಜೆಜೆಎಂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯು ಕುಷ್ಟಗಿ ಪಟ್ಟಣದ ನಿರೀಕ್ಷಣಾ‌ ಮಂದಿರದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಇದೆ ವೇಳೆ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿದ, ‘ಮಂದಗತಿಯಲ್ಲಿ ಸಾಗುತ್ತಿರುವ ಜೆಜೆಎಂ ಕಾಮಗಾರಿಗಳನ್ನು ಬೇಗನೆ ಮುಕ್ತಾಯಗೊಳಿಸಬೇಕು. ಮುಕ್ತಾಯಗೊಂಡ ಎಲ್ಲ ಕಾಮಗಾರಿಗಳನ್ನು ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಶಾಖಾಧಿಕಾರಿಗಳು ಪರಿಶೀಲಿಸಿ ಅದನ್ನು ತಮ್ಮ ಹಂತಕ್ಕೆ ಪಡೆದು ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೆ ವೇಳೆ ಜಿಪಂ ಸಿಇಓ ಅವರು, ಜೆಜೆಎಂ ತನಿಖಾ ನೊಡಲ್ ಅಧಿಕಾರಿಗಳಿಂದ ಜೆಜೆಎಂ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡಿ, 36 ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯೊಳಗೆ ಯಾವುದೇ ನಿರ್ಲಕ್ಷ್ಯ ತೋರದೆ ಮುಕ್ತಾಯಗೊಳಿಸಬೇಕು ಎಂದರು. ಅಲ್ಲದೇ ಗ್ರಾಮದ ಎಲ್ಲೆಡೆ ಸಿಸಿ ರಸ್ತೆಗಳು ಹಾಳಾಗಿರುವುದು ಕಂಡುಬಂದಿದ್ದು, 15 ದಿನಗಳ ಒಳಗಾಗಿ ಎಲ್ಲಾ ಗ್ರಾಮಗಳ ಸಿಸಿ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಕಾಮಗಾರಿಗಳನ್ನು ನಿರ್ವಹಿಸದೇ ವಿಳಂಬ ತೋರಿಸಿದ ಗುತ್ತಿಗೆದಾರ ಟೆಂಡರ್ ರದ್ದುಪಡಿಸಿ ಅವರ ಹೆಸರನ್ನು ಬ್ಲ್ಯಾಕ್ ಲಿಸ್ಟ್ನಲ್ಲಿ ಸೇರಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸಿಇಓ ಅವರು ನಿರ್ದೇಶನ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ತಾ.ಪಂ ಸಹಾಯಕ ನಿರ್ದೇಶಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!