ಕೊಪ್ಪಳ : ರಾಜ್ಯದಲ್ಲಿಅನೇಕ ಯೋಜನೆಗಳಿಗೆ ಹಣವೇ ಇಲ್ಲ ಎಂದು ತಮ್ಮ ಸರ್ಕಾರದ ಮಂತ್ರಿಗಳು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗುರವಾಗಿ ಮಾತನಾಡುತ್ತಿದ್ದು, ಇದು ಸರಿಯಲ್ಲ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ, ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಕೊಪ್ಪಳದಲ್ಲಿ “ಅಮೃತ ಭಾರತ ರೈಲು ನಿಲ್ದಾಣ” ಪುನಾಭಿವೃದ್ಧಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿ ಮೋದಿ ಅವರನ್ನು ಇಡೀ ಜಗತ್ತೇ ಮೆಚ್ಚಿದ್ದು, ಸಿದ್ದರಾಮಯ್ಯನವರಿಗೆ ಅಸೂಯೆ ಇರಬೇಕು ಎಂದು ಹೇಳಿದರು.
‘ರಾಜ್ಯದ ಅಭಿವೃದ್ಧಿಗಾದರೂ ಸಹಕಾರ ನೀಡಬೇಕಾಗುತ್ತದೆ.ನೀವು ಖಜಾನೆಯನ್ನೇ ಹಂಚಲು ಹೊರಟಿದ್ದೀರಿ, ಇನ್ನೊಬ್ಬರಿಗೆ ಬುದ್ಧಿ ಹೇಳ್ತೀರಾ? ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿ, ಅದಕ್ಕಾಗಿ ಹಣ ವಿನಿಯೋಗಿಸಿ ಎಂದು ಕಿವಿಮಾತು ಹೇಳಿದರು. ಯಾವ ದೇಶ ರೈಲು, ವಾಯುಮಾರ್ಗ, ಜಲಮಾರ್ಗ, ರಾಷ್ಟ್ರೀಯ ಹೆದ್ದಾರಿ ಹೆಚ್ಚಿಸುತ್ತದೆಯೋ ಆ ದೇಶವು ಜಗತ್ತಿನ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿದ್ದು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಲವಾರು ಜನಪರ ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶದ 508 ರೈಲು ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಆಯ್ಕೆ ಮಾಡಿ ರೈಲು ನಿಲ್ದಾಣಗಳಲ್ಲಿ ಆಸನಗಳು ಪ್ರಯಾಣಿಕರಿಗೆ ಸುಸಜ್ಜಿತ ಸೌಲಭ್ಯ ಜತೆಗೆ ಆಕರ್ಷಕ ವಾಸ್ತು ಶಿಲ್ಪ, ಪ್ರಯಾಣಿಕರ ಸ್ನೇಹಿ ಸೌಲಭ್ಯ ಕಲ್ಪಿಸಲಾಗುತ್ತದೆ. ಕೊಪ್ಪಳ ರೈಲು ನಿಲ್ದಾಣವಕ್ಕೆ .21 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ, ಮುನಿರಾಬಾದ್ ರೈಲು ನಿಲ್ದಾಣವನ್ನು .20 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಳಿಸಲಾಗುತ್ತಿದ್ದು, ಅಂಜನಾದ್ರಿಗೆ ಸುಲಭ ಸಂಪರ್ಕ ಕಲ್ಪಿಸಲು ಗಂಗಾವತಿ ರೈಲು ನಿಲ್ದಾಣ ಅಭಿವೃದ್ಧಿಗೆ ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಲಾಗಿದೆ’ ಎಂದು ಹೇಳಿದರು.