ಯಲಬುರ್ಗಾ : ತಾಲೂಕಿನ ಹಿರೇವಂಕಲಕುಂಟಾ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ 50ನೇ ಕನ್ನಡ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪ ಪ್ರಾಚಾರ್ಯ ಬಾಬುಸಾಬ ಲೈನದಾರ್ ಕನ್ನಡ ಭಾಷೆ ಜಗತ್ತಿನ ಅತ್ಯಂತ ಶ್ರೀಮಂತ ಸುಂದರ ಭಾಷೆಯಾಗಿದೆ. ಶತಮಾನಗಳ ಇತಿಹಾಸ ಹೊಂದಿರುವ ಈ ಭಾಷೆಯಲ್ಲಿ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಮೈಸೂರು ರಾಜ್ಯ ಕರ್ನಾಟಕ ರಾಜ್ಯ ಎಂದು ನಾಮಕರಣ ಹೊಂದಿ ಇಂದಿಗೆ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಂದ ಕನ್ನಡದ ಪ್ರಮುಖ ಕವಿಗಳು ರಚಿಸಿರುವ ಕವಿತೆಗಳ ಗೀತ ಗಾಯನ ಮಾಡಿಸಿ ಕನ್ನಡ ಶಾಲು ಧರಿಸಿ,ದ್ವಜ ಪ್ರದರ್ಶಿಸಿ ಅಭಿಮಾನ ತೋರಿಸಲಾಯಿತು. “ವಿದ್ಯಾರ್ಥಿಗಳಿಂದ ಕನ್ನಡ ವ್ಯಾಕರಣ ರಂಗೋಲಿ ” ಕನ್ನಡ ರಾಜ್ಯೋತ್ಸವ ಅಂಗವಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಮನೆ ಮನೆ ಮುಂದೆ ಕನ್ನಡ ವ್ಯಾಕರಣ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.ಸುಮಾರು 70 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ರಂಗೋಲಿ ಬಿಡಿಸಿ ಕನ್ನಡ ಅಭಿಮಾನ ಪ್ರದರ್ಶಿಸಿದ್ದಾರೆ. ವಿವಿಧ ಕನ್ನಡ ಗೀತೆಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿ ಸಂತಸಪಟ್ಟರು.
ಕನ್ನಡ ಭಾಷಾ ಶಿಕ್ಷಕರಾದ ತಿಮ್ಮಣ್ಣ ಜಗ್ಗಲ್ ರವರು ಕನ್ನಡ ನಾಡು ನುಡಿ ನೆಲ ಜಲ ಹಾಗೂ ಕರ್ನಾಟಕ ಏಕೀಕರಣ ಚಳವಳಿ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ವೀರೇಶ ವಿರೂಪಣ್ಣ ಕೋರಿ ,ನಿಕಟ ಪೂರ್ವ ಉಪಪ್ರಾಚಾರ್ಯ ಚಂದ್ರ ಕಾಂತಯ್ಯ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.