LOCAL NEWS : ನರೇಗಾ ನೌಕರರಿಗೆ ಸೇವಾ ಭದ್ರತೆ ಒದಗಿಸಿ : ಕೊಟ್ರೇಶ ಜವಳಿ.
ಕೊಪ್ಪಳ : ನರೇಗಾ ಎಲ್ಲ ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ ಹಾಗೂ ಬಾಕಿ 6 ತಿಂಗಳ ವೇತನ ಪಾವತಿಸುವಂತೆ ಒತ್ತಾಯಿಸಿ ಕೊಪ್ಪಳ ತಾಲೂಕು ಪಂಚಾಯತ್ ಮುಂದೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ & ಬೇರ್ ಫೂಟ್ ಟೆಕ್ನಿಷಿಯನ್ ಜಿಲ್ಲಾ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಘಟಕದ ಅಧ್ಯಕ್ಷರಾದ ಕೊಟ್ರೇಶ ಜವಳಿ ಅವರು ಮಾತನಾಡಿ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ , ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ರಾಜ್ಯದಲ್ಲಿ 5000ಕ್ಕೂ ಹೆಚ್ಚು ನೌಕರರಿಗೆ ಕಳೆದ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಎಲ್ಲಾ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬದ ಸದಸ್ಯರ ವೈದ್ಯಕೀಯ ವೆಚ್ಚಗಳು, ಪ್ರಯಾಣ ವೆಚ್ಚಗಳು, ಸಾಲಗಳ ಮರುಪಾವತಿ, ಇ.ಎಂ.ಐ. ಸೇರಿ ಅನೇಕ ರೀತಿಯ ಖರ್ಚುವೆಚ್ಚಗಳನ್ನು ನಿಭಾಯಿಸಲು ತೀವ್ರ ತೊಂದರೆಯುಂಟಾಗುತ್ತಿದೆ ಎಂದರು.
ಈಗಾಗಲೇ ಬೇಡಿಕೆಗಳ ಈಡೇರಿಕೆಗಾಗಿ ಜು.7 ರಿಂದ ರಾಜ್ಯದ್ಯಂತ ನೌಕರರು ಅಸಹಕಾರ ಚಳುವಳಿ ಮಾಡುತ್ತಿದ್ದು, ಕೂಡಲೇ ಬಾಕಿ ವೇತನ ಪಾವತಿಸಿ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆಯಾದರೂ ರಾಜ್ಯ ಸರಕಾರ ನೌಕರರ ವೇತನ ಪಾವತಿಸುವಲ್ಲಿ ತಾಂತ್ರಿಕ ಕಾರಣ ಹೇಳಿ ವಿಳಂಬ ಮಾಡುತ್ತಿದೆ. ಇದರಿಂದ ನೌಕರರು ಸಂಕಷ್ಟ ಎದುರಿಸುವಂತಾಗಿದೆ ಎಂದರು.
ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ ಹಾಗೂ ಬಾಕಿ 6 ತಿಂಗಳ ವೇತನ ಪಾವತಿ ಆಗುವವರೆಗೂ ಅಸಹಕಾರ ಚಳುವಳಿ ಮಾಡುತ್ತೇವೆ ಎಂದು ನೌಕರರು ಘೋಷಣೆ ಕೂಗಿದರು.