LOCAL NEWS : ಪಂಚ ಗ್ಯಾರಂಟಿ ಯೋಜನೆಯನ್ನು ಮನೆ ಮನೆಗೆ ತಲುಪಿಸಿ : ಹಜರತ್ ಹುಸೇನ್
ಕನಕಗಿರಿ : ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಆಗಬೇಕು. ಯೋಜನೆಯಿಂದ ಯಾರು ಹೊರಗುಳಿಯಬಾರದು ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಹಜರತ್ ಹುಸೇನ್ ಹೇಳಿದರು.
ಅವರು ತಾಲೂಕಿನ ನವಲಿ ಗ್ರಾ.ಪಂ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದರಿ ಯೋಜನೆಗಳಿಂದ ಆಗಿರುವ ಪ್ರಗತಿ ಹಾಗೂ ಗ್ರಾಮೀಣ ಭಾಗದ ಅರ್ಹ ಫಲಾನುಭವಿಗಳು ಸರ್ಕಾರದ 5 ಯೋಜನೆಗಳಿಂದ ಹೊರಗುಳಿಯಬಾರದೆಂಬ ಸದುದ್ದೇಶದಿಂದ ಅನುಷ್ಟಾನ ಸಮಿತಿಯ ನಡೆ ಗ್ರಾಮ ಪಂಚಾಯತಿ ಕಡೆ ಎಂಬ ಧ್ಯೇಯ ವ್ಯಾಖ್ಯಾನದಿಂದ ಕೂಡಿದ್ದು, ಸದರಿ ಯೋಜನೆಗಳ ಸಫಲತೆಯ ಬಗ್ಗೆ ಮಾತನಾಡಿ ಫಲಾನುಭವಿಗಳ ಜೊತೆ ಚರ್ಚಿಸಿದರು.
ಅನ್ನಭಾಗ್ಯ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ, ವಯಸ್ಸಾದ ಹಾಗೂ ಅಸಹಾಯಕ ಫಲಾನುಭವಿಗಳ ಬಯೋಮೆಟ್ರಿಕ್ ನಿಂದ ವಿನಾಯಿತಿ ನೀಡಿ ಪಡಿತರವನ್ನು ಫಲಾನುಭವಿಗಳ ಮನೆಗೆ ತಲುಪಿಸಬೇಕು. ಜೊತೆಗೆ ಪ್ರತಿ ತಿಂಗಳು 10 ನೇ ದಿನಾಂಕದೊಳಗೆ ರೇಷನ್ ಅಂಗಡಿಗೆ ಸರಬರಾಜು ಆಗುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಶಕ್ತಿ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ ಸದರಿ ಯೋಜನೆಯಡಿ ಗ್ರಾಮೀಣ ಭಾಗದ ಮಹಿಳೆಯರು ಈಗಾಗಲೆ ಸದುಪಯೋಗ ಪಡೆದುಕೊಳ್ಳುತ್ತಿದ್ದು ಯಾವುದೇ ತೊಂದರೆ ಇರುವುದಿಲ್ಲ ಹಾಗೊ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಬಸ್ಸುಗಳನ್ನು ಓಡಿಸಲು ಸೂಚಿಸಿದರು. ನಂತರ ಗೃಹ ಲಕ್ಷ್ಮೀ, ಗೃಹ ಜ್ಯೋತಿ ಯೋಜನೆ ಪ್ರಗತಿ ಪರಿಶೀಲಿಸಿ, ಯುವನಿಧಿ ಯೋಜನೆಯ ಪೋಸ್ಟರ್ ನ್ನು ಬಿಡುಗಡೆಗೊಳಿಸಿದರು.
ಬಳಿಕ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ರಾಜಶೇಖರ್ ಅವರು ಮಾತನಾಡಿ, ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಫಲಾನುಭವಿಗಳು ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾದ ಕುರಿತು ಯಶೋಗಾಥೆಗಳನ್ನು ಸಿದ್ದಪಡಿಸಿ ತಾಲೂಕು ಸಮಿತಿಗೆ ಸಲ್ಲಿಸಲು ತಿಳಿಸಿದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷರಾದ ಮಹಾದೇವಮ್ಮ, ಉಪಾಧ್ಯಕ್ಷರಾದ ನಾಗರಾಜ ತಳವಾರ, ಸರ್ವ ಸದಸ್ಯರು, ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿಯ ಸದಸ್ಯರಾದ ಯಮನೂರಪ್ಪ, ಕಲಿಕೇರಿ, ಕನಕಪ್ಪ ತಳವಾರ, ಭೀಮೇಶ, ಕರಿಯಪ್ಪ, ಗ್ಯಾನಪ್ಪ, ಜಗದೀಶ ರಾಠೋಡ್, ವಿರೇಶ್, ಜಗದೀಶ್ ಸುಳೇಕಲ್ ಸೇರಿದಂತೆ 5 ಯೋಜನೆಗಳ ಅನುಷ್ಟಾನ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಪಿಡಿಓ ವೀರಣ್ಣ ನಕ್ರಳ್ಳಿ, ಕಾರ್ಯದರ್ಶಿ ಕೊಟ್ರಯ್ಯಸ್ವಾಮಿ ಹಾಗೂ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಊರಿನ ಗುರು-ಹಿರಿಯರು, ಫಲಾನುಭವಿಗಳು ಹಾಜರಿದ್ದರು.