ಕುಕನೂರು : ಪಟ್ಟಣದಲ್ಲಿ ಯೂರಿಯ ಗೊಬ್ಬರಕ್ಕಾಗಿ ರೈತರ ಪರದಾಟ. ದಿನಕಳದಂತೆ ಯೂರಿಯ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆಯಂತೆ ಗೊಬ್ಬರ ಪೂರೈಕೆ ಆದರೂ ಕೂಡ ರೈತರ ಕೈಗೆ ಸೇರದ ಯೂರಿಯ ಗೊಬ್ಬರ ಎಲ್ಲಿ ಹೋಗುತ್ತಿದೆ ಏನು, ಆಗುತ್ತಿದೆ, ಇದು ಕೃತಕ ಅಭಾವ ಸೃಷ್ಟಿನಾ? ಅಥವಾ ನಿಜವಾದ ಅಭಾವನಾ? ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲದಂತಾಗಿ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
ಈ ವರ್ಷ ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಎಂಬ ಮಾತಿನಂತೆ, ಈ ವರ್ಷ ವರುಣ ರೈತರಿಗೆ ಕೃಪೆ ತೋರಿದರು ಕೂಡಾ ರಸ ಗೊಬ್ಬರದ ಮಾಲೀಕರು ರೈತರಿಗೆ ಕೃಪೆ ತೋರುತ್ತಿಲ್ಲ. ಕಳೆದ ಎರಡು ಮೂರು ವಾರಗಳಿಂದ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ರೈತರು ಎಲ್ಲ ಕೆಲಸಗಳನ್ನು ಬದಿಗೆ ಒತ್ತಿ ಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ದಿನವಿಡೀ ಸರದಿಗೆ ನಿಲ್ಲುವಂತಾಗಿದೆ.
ದಿನವಿಡೀ ಸರದಿಗೆ ನಿಂತರ ಕೂಡ ಅವಶ್ಯಕತೆ ಇರುವಷ್ಟು ಗೊಬ್ಬರ ಸಿಗುತ್ತಿಲ್ಲ. ಸಿಗೋದು ಕೇವಲ ಎರಡು ಅಥವಾ ಮೂರು ಚೀಲ ಗೊಬ್ಬರ ಮಾತ್ರ. ಸರಿಯಾದ ಸಮಯಕ್ಕೆ ಬೆಳೆಗಳಿಗೆ ಗೊಬ್ಬರ ನೀಡದಿದ್ದರೆ ಇಳುವರಿ ಕಮ್ಮಿಯಾಗುತ್ತದೆ ರೈತರಿಗೆ ನಷ್ಟವಾಗುತ್ತದೆ. ಪಟ್ಟಣದಲ್ಲಿ ರೈತರ ಕಷ್ಟವನ್ನು ಕೇಳೋರೆ ಇಲ್ಲದಂತಾಗಿದೆ. ಗೊಬ್ಬರದ ಸಮಸ್ಯೆಗೆ ಹೊಣೆ ಯಾರು. ಅನ್ನದಾತರಿಗೆ ಆಗುವ ಅನ್ಯಾಯಗಳಿಗೆ ಕೊನೆಯೇ ಇಲ್ಲವಾ? ಎಂಬಂತಾಗಿದೆ.