LOCAL NEWS : ಜನಸಾಮಾನ್ಯರಿಗೆ ಹೊರೆ ಮಾಡುತ್ತಿರುವುದು ಸರಿಯಲ್ಲ, ಸಂಸದರೆ ಮೊದಲು ನಿಮ್ಮ ಸ್ಥಾನ ನಿಭಾಯಿಸಿ : ಡಾ.ಕ್ಯಾವಟರ್
ಕೊಪ್ಪಳ : ಪ್ರೇರಣಾ ಸಂಸ್ಥೆಯ ಮೂಲಕ ಕ್ರಷರ ಉದ್ಯಮ ಹಿಡಿತಕ್ಕೆ ತೆಗೆದುಕೊಂಡು ಜನಸಾಮಾನ್ಯರು ಹಾಗೂ ಗುತ್ತಿಗೆದಾರರಿಗೆ ಸಮಸ್ಯೆ ಮಾಡುತ್ತಿರುವ ಸಂಸದ ರಾಜಶೇಖರ ಹಿಟ್ನಾಳ್ ನಡೆ ಸರಿಯಲ್ಲ. ಇಂತಹ ಕಾರ್ಯಗಳನ್ನು ಬಿಟ್ಟು ತಮ್ಮ ಸಂಸದ ಸ್ಥಾನವನ್ನು ಮೊದಲು ನಿರ್ವಹಿಸಿ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜನರು ಮತ ಚಲಾಯಿಸಿ, ತಮಗೆ ನೀಡಿರುವ ಅಧಿಕಾರವನ್ನು ಜನರ ಏಳ್ಗೆಗೆ ಜನಪ್ರತಿನಿಧಿಯಾದವನು ತನ್ನ ಸ್ಥಾನವನ್ನು ಬಳಸಬೇಕು. ಆದರೆ, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಅವರು ಗ್ರಾಹಕರ ವಿರೋಧಿ ನೀತಿ ಆರಂಭಿಸುವ ಮೂಲಕ ಪ್ರಮುಖವಾಗಿ ಜನಸಾಮಾನ್ಯರಿಗೆ ಹೊರೆಯಾಗಿಸುವ ಕೆಲಸ ಮಾಡುತ್ತಿದ್ದಾರೆ.
ಈವರೆಗೆ 600 ರಿಂದ 700 ದೊರೆಯುತ್ತಿದ್ದ ಜಲ್ಲಿ ಕಲ್ಲು ಇನ್ನೂ ಮುಂದೆ ಸಂಸದರ ನಡೆಯಿಂದ 1400-1500 ರೂ.ದೊರೆಯಲಿದೆ. ಇದರಿಂದ ನೇರ ಪರಿಣಾಮ ಈ ಭಾಗದ ಬಡವರು, ಮಧ್ಯಮ ವರ್ಗದವರಿಗೆ ತಟ್ಟಲಿದೆ. ತಮ್ಮದೇ ಒಡೆತನದ ಪ್ರೇರಣಾ ಎನ್ನುವ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ ಕ್ರಷರ ಉದ್ಯಮಿದಲ್ಲಿನ ಜಲ್ಲಿಕಲ್ಲು ಸೇರಿ ಪ್ರಮುಖ 8 ವಸ್ತುಗಳನ್ನು ಖರೀದಿ ಮಾಡುವ ನಿಯಮ ಹೇಳಿರುವುದು ಎಷ್ಟರ ಮಟ್ಟಿಗೆ ಸರಿ…? ಸಾರ್ವಜನಿಕರು ಹಾಗೂ ಗುತ್ತಿಗೆದಾರರು ತಮಗೆ ಬೇಕಾದ ಕ್ರಷರ ಮಾಲೀಕರೊಂದಿಗೆ ಜಲ್ಲಿಕಲ್ಲು ಈವರೆಗೆ ಖರೀದಿಸುತ್ತಿದ್ದರು.
ಆದರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮದೇ ಸಿಂಡಿಕೇಟ್ ಮಾಡಿಕೊಂಡು ಏಕಾಏಕಿ ಗ್ರಾಹಕರ ವಿರೋಧಿ ನಿಯಮ ಜಾರಿಗೊಳಿಸಿ, ವ್ಯವಸ್ಥೆಯಲ್ಲಿ ಹಿಟ್ಲರ್ ಆಡಳಿತ ಹೇರಲು ಹೊರಟಿರುವುದು ಅಕ್ಷಮ್ಯ ಅಪರಾಧ. ಪ್ರತಿ ತಿಂಗಳು 4 ರಿಂದ 5 ಕೋಟಿ ಕಮಿಷನ್ ಲಾಭದಾಸೆಗೆ ಹಿಟ್ನಾಳ್ ಜನಸಾಮಾನ್ಯರಿಗೆ ಹೊರೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ…?, ಕೂಡಲೇ ಈ ಪದ್ದತಿ ಸಂಸದ ರಾಜಶೇಖರ ಹಿಟ್ನಾಳ್ ಕೈ ಬಿಡಬೇಕು. ಜತೆಗೆ ಜಿಲ್ಲಾಡಳಿತ ಈ ವಿಚಾರದಲ್ಲಿ ಮುತುವರ್ಜಿ ವಹಿಸಿ, ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ಇದೇ ರೀತಿ ಪರಿಸ್ಥಿತಿ ಮುಂದುವರಿದರೇ ಜನರ ಪರವಾಗಿ ಹೋರಾಟ ಮಾಡುವ ಕೆಲಸವನ್ನು ನಮ್ಮ ಪಕ್ಷ ಮಾಡಲಿದೆ ಎಂದು ತಿಳಿಸಿದ್ದಾರೆ.