PV ವಿಶೇಷ ವರದಿ :
SPECIAL STORY : ಹತ್ತು ದಿನಗಳಿಂದ ಕುಡಿಯುವ ನೀರಿಗಾಗಿ ಜನರ ಪರದಾಟ..!: ಹಿಡಿ ಶಾಪ ಹಾಕುತ್ತಿರುವ ಗ್ರಾಮಸ್ಥರು..!!

ಕುಕನೂರು : ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ದಿನಗಳಿಂದ ಕುಡಿಯುವ ನೀರು ಪೂರೈಕೆ ಯಾಗದೇ, ಗ್ರಾಮಸ್ಥರೆಲ್ಲ ನೀರಿಗಾಗಿ ಆಹಾಕಾರ ಪಡುತ್ತಿರುವ ಪರಿಸ್ಥಿತಿ ಬನ್ನಿಕೊಪ್ಪ ಗ್ರಾಮದಲ್ಲಿ ನಿರ್ಮಾಣಗೊಂಡಿರುತ್ತದೆ.

ತಾಲೂಕಿನ ಬನ್ನಿಕೊಪ್ಪ ಗ್ರಾಮದ ಜನತೆ ಹಲವು ವರ್ಷಗಳಿಂದ ಆಗಾಗ ನೀರಿನ ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದು, ಕಳೆದ 2024ರ ಅಕ್ಟೋಬರ್ ನಲ್ಲಿಯೂ ಸಹ ನೀರಿಗಾಗಿ ಆಹಾಕಾರ ಉಂಟಾಗಿರವದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜಲಜೀವನ ಮಿಷನ್ ಜಾರಿಗೆ ಹಲವು ವರ್ಷಗಳೇ ಕಳೆದರೂ ಇಲ್ಲಿನ ಗ್ರಾಮದ ಜನತೆಗೆ ಮಾತ್ರ ನೀರನ್ನ ತಾಪತ್ರಯ ತಪ್ಪುತಿಲ್ಲ.
ಈ ಗ್ರಾಮವು ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವಾಗಿದ್ದರು ಸಹ ಇಲ್ಲಿ ಕುಡಿಯುವ ನೀರಿನ ಆಹಾಕಾರ ಮಿತಿ ನೀರಿದ್ದು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ 2 ರಿಂದ 3 ಬೋರ್ವೆಲ್ ಗಳಿದ್ದರೂ ಸಹ ಅದರಿಂದ ದೊರೆಯುವ ನೀರು ಬಳಸಲು ಸಹ ಯೋಗ್ಯವಲ್ಲದ ರೀತಿ ಇದ್ದು ಇನ್ನು ಕುಡಿಯಲು ಸಾಧ್ಯವಿಲ್ಲದಂತಹ ನೀರನ್ನು ಹೊಂದಿರುತ್ತದೆ. ಗ್ರಾಮಕ್ಕೆ ಕುಡಿಯುವ ನೀರಿನ ಮೂಲವಾದ ತುಂಗಭದ್ರ ನದಿ ದಂಡೆಯ ನೇಲೋಗಿಪುರದಿಂದ ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಕೆಲವು ಹಳ್ಳಿಗಳಿಗೆ ಪೂರೈಕೆಯಾಗುವ ತುಂಗಭದ್ರ ಪೈಪ್ ಲೈನ್ ಬನ್ನಿಕೊಪ್ಪ ಗ್ರಾಮದ ಮುಖಾಂತರ ಹಾದು ಹೋಗಿದ್ದು ಇದರ ಮುಖಾಂತರ ಸರಬರಾಜಾಗುವ ನೀರು ಹಾಗೂ ಜಲಜೀವನ್ ಮಿಷನ್ ಯೋಜನೆಯಿಂದ ಒದಗುವ ನೀರು ಮಾತ್ರ ಗ್ರಾಮದಲ್ಲಿ ಕುಡಿಯಲು ಯೋಗ್ಯವಾಗಿದ್ದು, ಈ ಎರಡು ಮೂಲಗಳು ಸದ್ಯ ಕಳೆದ ಹತ್ತು ದಿನಗಳಿಂದ ನೀರಿನ ಪೂರೈಕೆ ಮಾಡಲು ಸಾಧ್ಯವಾಗದೇ ಇರುವುದರಿಂದ ಗ್ರಾಮದ ಜನತೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.
