LOCAL NEWS : ಕುಕನೂರು | ಆರ್‌ಎಸ್‌ಎಸ್ ಶತಮಾನೋತ್ಸವ: ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ..!

You are currently viewing LOCAL NEWS : ಕುಕನೂರು | ಆರ್‌ಎಸ್‌ಎಸ್ ಶತಮಾನೋತ್ಸವ: ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ..!

LOCAL NEWS : ಕುಕನೂರು|ಆರ್‌ಎಸ್‌ಎಸ್ ಶತಮಾನೋತ್ಸವ: ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ..!

ಪ್ರಜಾವೀಕ್ಷಣೆ ಸುದ್ದಿ : 

ಕುಕನೂರು: ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಶನಿವಾರ ಹಿಂದೂ ಸಮಾಜೋತ್ಸವ ಹಾಗೂ ಬೃಹತ್ ಶೋಭಾಯಾತ್ರೆ ನಡೆಯಿತು.

ಪಟ್ಟಣದ ಮಹಾಮಾಯ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೃಪತುಂಗ ನಗರದಲ್ಲಿ ಸಮಾಪ್ತಿಗೊಂಡಿತು. ಅಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಉತ್ತರ ಕರ್ನಾಟಕ ವಿಭಾಗದ ಕುಟುಂಬ ಪ್ರಮೋದಕ ಪ್ರಾಂತ ಸಂಯೋಜಕ ಡಬ್ಲ್ಯೂ. ನಾಗರಾಜ್, ‘ಸಾಮಾಜಿಕ ಜಾಗೃತಿ ಹಾಗೂ ರಾಷ್ಟ್ರ ಭದ್ರತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. “ಭಾರತದ ಮೇಲೆ ದಾಳಿ ಮಾಡುವ ಶಕ್ತಿಗಳಿಗೆ ಕೇವಲ ಅಹಿಂಸೆಯ ಮೂಲಕ ಉತ್ತರಿಸುವ ಕಾಲ ಮುಗಿದಿದೆ. ಕಾಲಾನುಸಾರ ದೃಢ ನಿಲುವು ಅಗತ್ಯ. ಹಿಂದೂ ಸಮಾಜವು ಬದಲಾಗಬೇಕಿದೆ” ಎಂದು ಹೇಳಿದರು.

ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಅರಿವು ಮೂಡಿಸುವ ಜವಾಬ್ದಾರಿ ಶಾಲೆ, ಮಠ, ಮಂದಿರಗಳ ಜೊತೆಗೆ ಪೋಷಕರ ಮೇಲಿದೆ ಎಂದ ಅವರು, “ಟಿವಿ, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಪರಿಣಾಮವಾಗಿ ಸಂಸ್ಕೃತಿ ಮರೆಯಾಗುತ್ತಿದೆ. ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಕುಟುಂಬ ಸದಸ್ಯರು ಒಟ್ಟಾಗಿ ಧಾರ್ಮಿಕ ವಿಚಾರಗಳು, ಭಜನೆ ಹಾಗೂ ದಾರ್ಶನಿಕರ ಕುರಿತು ಚರ್ಚೆ ನಡೆಸಬೇಕು. ಇದರಿಂದ ಸಾಮರಸ್ಯ ಹಾಗೂ ಒಗ್ಗಟ್ಟು ಸಾಧ್ಯ” ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಚಿಕ್ಕ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ನೃತ್ಯ ಪ್ರದರ್ಶನಗಳು ನಡೆದವು. ಶಿವಾಜಿ ಮಹಾರಾಜರ ಜೀವನಾಧಾರಿತ ಹಾಡುಗಳಿಗೆ ನಡೆದ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.

ಭಾಷಣದ ವೇಳೆ ಖಾಲಿ ಕುರ್ಚಿಗಳು…!!

ಕಾರ್ಯಕ್ರಮ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಕೆಲವರು ಉಪಹಾರಕ್ಕಾಗಿ ಊಟದ ಸ್ಥಳದತ್ತ ತೆರಳಿದ ಪರಿಣಾಮ ವೇದಿಕೆಯ ಮುಂಭಾಗದಲ್ಲಿ ಕುರ್ಚಿಗಳು ಖಾಲಿ ಕಂಡುಬಂದವು. ಈ ಹಿನ್ನೆಲೆಯಲ್ಲಿ ಅತಿಥಿಗಳಲ್ಲಿ ಅಸಮಾಧಾನ ವ್ಯಕ್ತವಾದುದು ಕಂಡುಬಂತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್, ಅನ್ನದಾನೇಶ್ವರ ಶಾಖಾಮಠದ ಮಹದೇವ ಸ್ವಾಮಿಗಳು, ಆತ್ಮಾನಂದ ಅವಧೂತ ಸ್ವಾಮಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ಯಾಮಣ್ಣ ಜಮಖಂಡಿ ವಹಿಸಿದ್ದರು. ನವೀನ್ ಕುಮಾರ್ ಗುಳುಗಣ್ಣನವರ್, ಬಸುರಾಜ್ ರಾಜೂರ, ಬಸನಗೌಡ ತೊಂಡಿಹಾಳ, ಅನಿಲ್ ಆಚಾರ್, ಮಂಜುನಾಥ್ ನಾಡಗೌಡ್ರು, ಶಿವಕುಮಾರ್ ನಾಗಲಾಪುರಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

error: Content is protected !!