LOCAL NEWS : ‘ಬಂಜಾರ ಸಮುದಾಯದ ಆತ್ಮಸ್ಥೈರ್ಯ (Self-confidence/Courage) ಕುಗ್ಗಿಸಲು ಶಾಸಕ ಚಂದ್ರು ಲಮಾಣಿ ಬಂಧನ’: ಸುರೇಶ ಬಳೂಟಗಿ ಆರೋಪ!
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು ಫೆ. 24 : ಬಂಜಾರ ಸಮಾಜವನ್ನು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರ್ನಾಮ ಮಾಡಲು ಕಾಂಗ್ರೆಸ ನಾಯಕರು ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಚು ರೂಪಿಸಿ ಶಿರಹಟ್ಟಿಯ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ದಾಳಿ ಮಾಡಿಸುವುದರ ಮೂಲಕ ಬಂಧಿಸಿರುವುದು ಖಂಡನೀಯ ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಹೇಳಿದರು.
ಇಂದು ಪಟ್ಟಣದಲ್ಲಿ ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಪರಿಶಿಷ್ಟ ಜಾತಿಯ ನಾಯಕರನ್ನು ತುಳಿಯುತ್ತ ಬಂದಿರುವುದು ನಮಗೆಲ್ಲ ಗೊತ್ತಿರುವ ವಿಚಾರ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನೇ ರಾಜಕೀಯವಾಗಿ ಸೋಲಿಸಿ, ಅವರು ಮರಣವಾದ ಸಮಾಧಿಗೆ ಒಂದಿಂಚೂ ಜಾಗ ನೀಡದೇ ಅವರನ್ನು ತುಚ್ಚವಾಗಿ ಕಂಡ ಪಕ್ಷ ಕಾಂಗ್ರೆಸ್.ಅಂಬೇಡ್ಕರ ಅವರ ಜ್ಞಾನಕ್ಕೆ ಇಡೀ ವಿಶ್ವ ತಲೆ ತೂಗುತ್ತಿದ್ದರೂ ಭಾರತ ರತ್ನ ಪ್ರಶಸ್ತಿ ನೀಡದೆ ಅವಮಾನ ಮಾಡಿದ ಪಕ್ಷ ತಮ್ಮ ವಂಶಸ್ಥರಿಗೆಲ್ಲ ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ನೀಡಿಕೊಂಡು ದೊಡ್ಡ ಸಾಧನೆ ಮಾಡಿದವರ ಥರ ಇವತ್ತು ಭಾಷಣ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೋರಹಾಕಿದರು.
ನಮ್ಮ ಬಂಜಾರ ಸಮಾಜದ ಬಡ ಕುಟುಂಬದಿಂದ ಶ್ರಮಪಟ್ಟು ಓದಿ ವೈದ್ಯರಾಗಿ ಸಮಾಜ ಸೇವೆ ಮಾಡುವ ಮೂಲಕ ಪ್ರಸಿದ್ಧರಾದ ಡಾಕ್ಟರ್ ಚಂದ್ರು ಲಮಾಣಿ ಅವರನ್ನು ಗುರುತಿಸಿ ಬಿಜೆಪಿ ಪಕ್ಷ ಟಿಕೆಟ್ ನೀಡಿ ಗೆಲ್ಲಿಸಿ, ಶಾಸಕರನ್ನಾಗಿ ಮಾಡಿದ್ದರು. ಶಾಸಕರಾಗಿ ಶಿರಹಟ್ಟಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ಒಳಮೀಸಲಾತಿ ಬಗ್ಗೆ ಸದನದಲ್ಲಿ ವಿರೋಧಿಸಿದ ಕಾರಣಕ್ಕೆ ಇವರ ಧ್ವನಿ ಅಡಗಿಸಲು ಕಾಂಗ್ರೆಸ್ ನಾಯಕರು ಹಾಗೂ ಕೆಲವು ಸಮಾಜ ಘಾತುಕರು ಸಂಚು ರೂಪಿಸಿ,ಅಮಾಯಕ ಡಾಕ್ಟರ್ ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಪೊಲೀಸರ ಮೂಲಕ ದಾಳಿ ಮಾಡಿ ಅವರನ್ನು ರಾಜಕೀಯವಾಗಿ ಮುಗಿಸಲು ಬಂಧಿಸಿರುವುದು ದುರಂತ ಎಂದರು.
‘ನಮ್ಮ ಬಂಜಾರ ಸಮುದಾಯದ ಆತ್ಮ ವಿಶ್ವಾಸ ಕುಗ್ಗಿಸಲು ಈ ರೀತಿ ಅನೇಕ ಪ್ರಕರಣ ದಾಖಲು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ,ನಮ್ಮ ರಾಜಕೀಯ ಜೀವನಕ್ಕೆ ತೊಡಕಾಗುತ್ತಾರೆಂದು ಚಿತ್ತಾಪುರ ಕ್ಷೇತ್ರದ ಬಂಜಾರ ಸಮುದಾಯದ ಮುಖಂಡ ಮಣಿಕಂಠ ರಾಠೋಡ ಅವರ ಮೇಲೆ ಅನೇಕ ಪ್ರಕರಣ ದಾಖಲಿಸಿ ಅವರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿರುವುದು ಇದೇ ಕಾಂಗ್ರೆಸ್ ಪಕ್ಷದ ನಾಯಕರು. ನಾವು ನ್ಯಾಯ ಕೇಳಲು ಹೋರಾಟ ಮಾಡಿದರೆ ಎಫ್. ಐ. ಆರ್.ದಾಖಲಿಸಿ ಮಾನಸಿಕವಾಗಿ ಕುಗ್ಗಿಸಲು ತಂತ್ರ ಹೂಡಿದ್ದು, ಇದೇ ಕಾಂಗ್ರೆಸ್ ನಾಯಕರು. ಹೀಗಾಗಿ ಈ ಕೂಡಲೇ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ನಡೆಸಿ, ಇದರ ಪೂರ್ವಾಪರ ವಿಚಾರಣೆ ನಡೆಸಿ ಅಮಾಯಕ ಶಾಸಕರನ್ನು ಬಿಡುಗಡೆಗೊಳಿಸಬೇಕು.
ಇದೇ ಥರ ನಮ್ಮ ಬಂಜಾರ ಸಮುದಾಯವನ್ನು ಹತ್ತಿಕ್ಕಲು ನೀವು ಇಂಥ ವಾಮ ಮಾರ್ಗ ಅನುಸರಿಸಿದರೆ ನಾವು ರಾಜ್ಯಾದ್ಯಂತ ನಿಮ್ಮ ವಿರುದ್ಧ ಹೋರಾಡುತ್ತೇವೆ. ನಮ್ಮ ಬಂಜಾರ ಸಮುದಾಯದ ಜನರ ಬೆಂಬಲದಿಂದ ನಿಮಗೆ ಅಧಿಕಾರ ಸಿಕ್ಕಿದೆ, ಇದನ್ನು ಮರೆತ ನಿಮ್ಮನ್ನು ಮುಂದಿನ ದಿನಗಳಲ್ಲಿ ನಿಮಗೆ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲು ನಾವೆಲ್ಲ ಸೇರಿ ತಯಾರಾಗಿದ್ದೇವೆ . ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರನ್ನು ಮತ್ತು ನಾಯಕರನ್ನು ಗುರಿಯಾಗಿಸಿ ಇಂಥ ಕಾರ್ಯ ಮಾಡುವ ಬದಲು ನಮ್ಮನ್ನು ಬೆಳೆಸುವ ಯೋಜನೆ ತರುವ ಬಗ್ಗೆ ವಿಚಾರ ಮಾಡಬೇಕು ಎಂದರು.