Post Views: 94
LOCAL NEWS : ಈ ದೇಶದಲ್ಲಿ ಬಂಜಾರ ಸಮಾಜವನ್ನು ವ್ಯವಸ್ಥಿತವಾಗಿ ಛಿದ್ರಗೊಳಿಸಲಾಗಿದೆ : ಉಮೇಶ್ ರಾಠೋಡ್ ಆಕ್ರೋಶ

ಪ್ರಜಾವೀಕ್ಷಣೆ ಡಿಜಿಟಲ್ ಮೀಡಿಯಾ ಸುದ್ದಿ :
ಕುಕನೂರು, ಎ. 02 : ‘ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿರುವ ಬಂಜಾರ ಸಮಾಜವನ್ನು ಈ ದೇಶದಲ್ಲಿ ವ್ಯವಸ್ಥಿತವಾಗಿ ಛಿದ್ರ ಛಿದ್ರ ಮಾಡಲಾಗಿದೆ ಎಂದು ಸಾಮಾಜಿಕ ಚಳುವಳಿ ಹೋರಾಟಗಾರ, ಗೋರ್ ಸಿಕವಾಡಿ ಪುಲ್ ಟೈಮೆರ್, ಉಮೇಶ್ ವಿಷ್ಣು ನಾಯ್ಕ್ ರಾಠೋಡ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರದಂದು (ಮಾರ್ಚ್ 31) ತಾಲ್ಲೂಕಿನ ಕಕ್ಕಿಹಳ್ಳಿ ಗ್ರಾಮದ ಸೇವಾಲಾಲ್ ನಗರದಲ್ಲಿ ನಡೆದ “ಸಾಂಸ್ಕೃತಿಕ, ಸಂಪ್ರದಾಯ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮ”ವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಮಾಜದ ಇಂದಿನ ದುಸ್ಥಿತಿಗೆ ರಾಜಕೀಯ ವ್ಯವಸ್ಥೆ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯವೇ ಕಾರಣ ಜೊತೆಗೆ ವಿವಿಧ ರಾಜ್ಯಗಳಲ್ಲಿ ಬಂಜಾರ ಸಮಾಜವನ್ನು ಬೇರೆ ಬೇರೆ ವರ್ಗಗಳಿಗೆ (SC/ST/OBC) ಸೇರಿಸುವ ಮೂಲಕ ಸಮುದಾಯದ ಒಟ್ಟಾರೆ ಬಲವನ್ನು ಕುಂದಿಸಲಾಗಿದೆ ಎಂದು ನೇರ ಆರೋಪ ಮಾಡಿದರು.
‘ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಹರಿದು ಹಂಚಿಹೋಗುವಂತೆ ಸಮುದಾಯವನ್ನು ವಿಭಜನೆ ಮಾಡಲಾಗಿದೆ. ಇದರಿಂದಾಗಿ ಸಮುದಾಯದ ಒಗ್ಗಟ್ಟು ಮತ್ತು ಹೋರಾಟದ ಶಕ್ತಿ ಕುಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಉಮೇಶ್ ರಾಠೋಡ್ ಅವರು ಇಡೀ ಬಂಜಾರ ಸಮುದಾಯಕ್ಕೆ ಒಗ್ಗೂಡುವಂತೆ ಕರೆ ನೀಡಿದರು. ಜಾತಿ, ಪಂಗಡ ಅಥವಾ ಪ್ರಾದೇಶಿಕ ಭೇದಭಾವ ಮರೆತು ತಮ್ಮ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರಾಜ್ಯ ಗೋರ್ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೋಟಗಿ ಮಾತನಾಡಿ, ‘ನಮ್ಮ ಸಮಾಜಕ್ಕೆ ಸಿಗಬೇಕಾದ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಮೀಸಲಾತಿ ವಿಷಯದಲ್ಲಿ ಸಮಾಜಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ,” ಎಂದು ಹೇಳಿದರು.
ಈ ವೇಳೆಯಲ್ಲಿ ತಾಂಡಾದ ನಾಯಕ್ ಬಸವಂತಪ್ಪ ಕಟ್ಟಿಮನಿ, ಪೂಜಾರಿ ಹಂಪಣ್ಣ ಕಟ್ಟಿಮನಿ, ಯಲ್ಲಪ್ಪ ಕಾರಭಾರಿ, ತಿಪ್ಪಣ್ಣ ಕಾರಭಾರಿ, ವಿಶ್ವನಾಥ್ ಬಳಗೇರಿ, ಕಲ್ಲಪ್ಪ ಕಟ್ಟಿಮನಿ, ರಾಘವೇಂದ್ರ ಬಳಗೇರಿ, ನಾಗರಾಜ್ ಭಾನಾಪುರ್, ಚೇತನ್ ಬಳಗೇರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.