You are currently viewing FLASH NEWS : ಛಲಬಿಡದ ಶ್ರಮಕ್ಕೆ ಒಲಿದ ಪ್ರತಿಫಲ : ತರಕಾರಿ ವ್ಯಾಪಾರಿಯ ಮಗ ಪಿಯುಸಿ ಪರೀಕ್ಷೆಯಲ್ಲಿ 92% ಸಾಧನೆ!

FLASH NEWS : ಛಲಬಿಡದ ಶ್ರಮಕ್ಕೆ ಒಲಿದ ಪ್ರತಿಫಲ : ತರಕಾರಿ ವ್ಯಾಪಾರಿಯ ಮಗ ಪಿಯುಸಿ ಪರೀಕ್ಷೆಯಲ್ಲಿ 92% ಸಾಧನೆ!

FLASH NEWS : ಛಲಬಿಡದ ಶ್ರಮಕ್ಕೆ ಒಲಿದ ಪ್ರತಿಫಲ : ತರಕಾರಿ ವ್ಯಾಪಾರಿಯ ಮಗ ಪಿಯುಸಿ ಪರೀಕ್ಷೆಯಲ್ಲಿ 92% ಸಾಧನೆ!

ಪ್ರಜಾವೀಕ್ಷಣೆ ಡಿಜಿಟಲ್ ಮಾಧ್ಯಮ ಡೆಸ್ಕ್ :

ಕುಕನೂರು, ಏ. 11 : “ಬಡತನ ಸಾಧನೆಗೆ ಅಡ್ಡಿಯಲ್ಲ, ಬದಲಿಗೆ ಅದು ಯಶಸ್ಸಿನ ಏಣಿಯಾಗಬಲ್ಲದು” ಎಂಬುದನ್ನು ತಾಲೂಕಿನ ತರಕಾರಿ ವ್ಯಾಪಾರಿಯೊಬ್ಬರ ಪುತ್ರ ಇಂದು ಸಾಬೀತುಪಡಿಸಿದ್ದಾರೆ. ಈಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ. 92ರಷ್ಟು ಅಂಕಗಳನ್ನು ಗಳಿಸುವ ಮೂಲಕ ಈ ಯುವಕ ಜಿಲ್ಲೆಯ ಗಮನ ಸೆಳೆದಿದ್ದಾನೆ.

ಇದೇ ತಾಲೂಕಿನ ಕಕ್ಕಿಹಳ್ಳಿ ತಾಂಡದ ನಿವಾಸಿಗಳಾದ ಈರಪ್ಪ ಕಾರಭಾರಿ ಹಾಗೂ ರೇಣವ್ವ ಕಾರಭಾರಿ, ಇವರು ದಿನನಿತ್ಯ ಕಾಯಕ ಸಂತೆ ಇದ್ದ ಕಡೆ ಊರುರೂ ತಿರುಗಾಡಿ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದಾರೆ. ಇವರ ನಾಲ್ಕು ಜನ ಮಕ್ಕಳಲ್ಲಿ ಇಬ್ಬರನ್ನು ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಅದರಲ್ಲಿ ಕೊನೆಯ ಮಗನಾದ ಶಶಿಕುಮಾರ್ ಕಾರಭಾರಿ ಈ ಸಾಧನೆ ಮಾಡಿರುವ ವಿದ್ಯಾರ್ಥಿಯಾಗಿದ್ದಾನೆ.

ತರಕಾರಿ ಮಾರುವವರ ಮಗನ ಸಾಧನೆ, ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92.16 ಅಂಕ ಪಡೆದು ಸಾಧನೆ.

ಕುಕನೂರ ತಾಲೂಕಿನ ಕಕ್ಕಿಹಳ್ಳಿ ತಾಂಡಾದ ತರಕಾರಿ ಮಾರಾಟ ಮಾಡುವ ಬಡ ಕುಟುಂಬದಲ್ಲಿ ಜನಿಸಿದ ಶಶಿಕುಮಾರ ಈರಪ್ಪ ಕಾರಭಾರಿ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 552 ಅಂಕ ಪಡೆದು ಶೇಕಡ 92.16 ಪಡೆದು ತೇರ್ಗಡೆಯಾಗಿದ್ದಾನೆ. ದಿನ ನಿತ್ಯ ಹೊಟ್ಟೆಪಾಡಿಗಾಗಿ ತರಕಾರಿ ಮಾರುವ ಕಕ್ಕಿಹಳ್ಳಿ ತಾಂಡಾದ ಈರಪ್ಪ ಮತ್ತು ರೇಣಮ್ಮ ಕಾರಭಾರಿ ಇವರ ದ್ವಿತೀಯ ಸುಪುತ್ರ ಶಶಿಕುಮಾರ ಚಿಕ್ಕಂದಿನಿಂದಲೂ ಓದಿನಲ್ಲಿ ಹಾಗೂ ಆಟೋಟದಲ್ಲಿ ಸದಾ ಮುಂದು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಇತರರಿಗೆ ಮಾದರಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆ ಕಕ್ಕಿಹಳ್ಳಿಯಲ್ಲಿ ಪ್ರೌಢ ಶಿಕ್ಷಣವನ್ನು ಕುಕನೂರಿನ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಬೇಂದ್ರೆ ಕಾಲೇಜು ಧಾರವಾಡದಲ್ಲಿ ಪೂರೈಸಿರುವ ಶಶಿಕುಮಾರ ಬಡತನದಲ್ಲಿ ಅರಳಿದ ಪ್ರತಿಭೆ.

*ಮುಂದೆ ಡಾಕ್ಟರ್ ಆಗುವ ಕನಸು…!*

ಮುಂದೆ ನೀಟ್ ನಲ್ಲಿ ಅತ್ಯತ್ತಮ ಸಾಧನೆ ಮಾಡಿ ಎಂ. ಬಿ. ಬಿ. ಎಸ್ ಓದಿ ಒಳ್ಳೆಯ ವೈದ್ಯನಾಗಿ ಬಡವರ ಸೇವೆ ಮಾಡುವ ಆಸೆ ಇಟ್ಟಿರುವ ಶಶಿಕುಮಾರ್.

*ಸತತ ಪರಿಶ್ರಮಕ್ಕೆ ಸಿಕ್ಕ ಫಲ..!*

ಶಶಿಕುಮಾರ್ ಯಾವುದೇ ದುಬಾರಿ ಟ್ಯೂಷನ್ ಅಥವಾ ಕೋಚಿಂಗ್‌ಗೆ ಹೋಗದೆ ಕೇವಲ ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನ ಮತ್ತು ಸ್ವಯಂ ಅಧ್ಯಯನದ ಮೇಲೆ ಅವಲಂಬಿತನಾಗಿದ್ದನು.

“ನನ್ನ ತಂದೆ-ತಾಯಿ ಬಿಸಿಲಿನಲ್ಲಿ ನಿಂತು ನಮಗಾಗಿ ದುಡಿಯುವುದನ್ನು ಕಂಡಾಗ, ಓದಿನ ಮೂಲಕ ಅವರ ಕಷ್ಟಕ್ಕೆ ಬೆಲೆ ಕೊಡಬೇಕೆಂದು ನಿರ್ಧರಿಸಿದೆ. ನನ್ನ ಈ ಯಶಸ್ಸಿಗೆ ತಂದೆಯ ಪರಿಶ್ರಮವೇ ಕಾರಣ,” ಎಂದು ಶಶಿಕುಮಾರ್ ಭಾವುಕನಾಗಿ ಹೇಳಿದ್ದಾನೆ.

​ಅಂಕಗಳ ವಿವರ:

​ಒಟ್ಟು ಅಂಕಗಳು: 600 ಕ್ಕೆ 552 (92%)

*​ತಂದೆ-ತಾಯಿ ಹೆಮ್ಮೆ ಮತ್ತು ಭವಿಷ್ಯದ ಕನಸು*

​”ನಾವು ಶಾಲೆಗೆ ಹೋದವರಲ್ಲ, ಕಷ್ಟಪಟ್ಟು ವ್ಯಾಪಾರ ಮಾಡಿ ಇವನನ್ನು ಓದಿಸುತ್ತಿದ್ದೇವೆ. ಇಂದು ಮಗ ಉತ್ತಮ ಅಂಕ ಪಡೆದಿರುವುದು ನಮಗೆ ಸಂಭ್ರಮ ತಂದಿದೆ. ಮಗನ ಮುಂದಿನ ಉನ್ನತ ವ್ಯಾಸಂಗಕ್ಕೆ ನನ್ನ ಸಂಪೂರ್ಣ ಸಹಕಾರವಿದೆ,” ಎಂದು ತಂದೆ ಈರಪ್ಪ ಹೆಮ್ಮೆಯಿಂದ ನುಡಿದರು.

ಇವನ ಈ ಸಾಧನೆಯನ್ನು ಕಕ್ಕಿಹಳ್ಳಿ ತಾಂಡಾದ ಗ್ರಾಮದ ಗುರು ಹಿರಿಯರು ಅಭಿನಂದನೆ ಸಲ್ಲಿಸಿದ್ದು, ಈ ವಿದ್ಯಾರ್ಥಿಯನ್ನು ಅಭಿಮಾನ ಪೂರಕವಾಗಿ ಊರಿನ ಎಲ್ಲರೂ ಸೇರಿ ಸನ್ಮಾನಿಸಿದ್ದಾರೆ.

ಈ ಸಂದರ್ಭದಲ್ಲಿ ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ, ಮೇಘರಾಜ ಬಳಗೇರಿ, ಯಮನೂರಪ್ಪ ಕಟ್ಟಿಮನಿ, ಕುಮಾರ ಇಟಗಿ, ಕುಮಾರ್ ಬಳಗೇರಿ, ಸೋಮಪ್ಪ ಕಾರಭಾರಿ, ರಾಘವೇಂದ್ರ ಬಳಗೇರಿ, ನಾಗರಾಜ ಭಾನಾಪುರ, ಶ್ರೀಕಾಂತ್ ಕಟ್ಟಿಮನಿ, ಪಾಲಕರಾದ ಶ್ರೀ ಈರಪ್ಪ ಕಾರಭಾರಿ, ರೇಣಮ್ಮ ಕಾರಭಾರಿ ಹಾಗೂ ಎಲ್ಲಾ ಯುವ ಮಿತ್ರರು ಭಾಗವಹಿಸಿದ್ದರು.

Leave a Reply

error: Content is protected !!