BIG NEWS : ಕ್ಷೇತ್ರ ಮರುವಿಂಗಡಣೆ ವಿಚಾರ : ದಕ್ಷಿಣ ಭಾರತಕ್ಕೆ ಬಹುದೊಡ್ಡ ಅನ್ಯಾಯ ಮಾಡಲು ಹೊರಟಿದ್ದ ಮೋದಿ ಸರ್ಕಾರಕ್ಕೆ ತಕ್ಕ ಪಾಠ!: ಶಾಸಕ ರಾಯರೆಡ್ಡಿ
ಮಹಿಳಾ ಮೀಸಲಾತಿ ಹೆಸರಿನಲ್ಲಿ ಕೇಂದ್ರದ ಕುತಂತ್ರ : ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಏಪ್ರಿಲ್ 20 : “ಮಹಿಳಾ ಮೀಸಲಾತಿ ಜಾರಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ (Delimitation) ತಳುಕು ಹಾಕಿರುವುದು ದಕ್ಷಿಣ ಭಾರತದ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ರೂಪಿಸಿರುವ ದೊಡ್ಡ ರಾಜಕೀಯ ಪಿತೂರಿ ಮಾಡುವುದಕ್ಕಾಗಿ ಹೊರಟಿತ್ತು ಆದರೆ, ನಾವೂ ನಮ್ಮ ಮಿತ್ರಪಕ್ಷಗಳು ಅದನ್ನ ತಡೆದಿವೆ” ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ಈ ಕುರಿತು ಭಾನುವಾರ ಪಟ್ಟಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ರಾಜಕೀಯವಾಗಿ ಶಿಕ್ಷೆ ನೀಡುವ ಈ ನಡೆಯನ್ನು ಅವರು ಅಂಕಿ-ಅಂಶಗಳ ಮೂಲಕ ವಿಶ್ಲೇಷಿಸಿ, ಮಹಿಳಾ ಮೀಸಲಾತಿ ವಿಧೇಯಕದ ಹಿಂದಿರುವ ಅಸಲಿ ಮುಖವಾಡವನ್ನು ಬಯಲು ಮಾಡಿದರು.
ದಕ್ಷಿಣ ಭಾರತಕ್ಕೆ ಆಗಲಿರುವ ಅನ್ಯಾಯ : 2026ರ ಬಳಿಕ ನಡೆಯಲಿರುವ ಕ್ಷೇತ್ರ ಮರುವಿಂಗಡಣೆಯಿಂದ ಲೋಕಸಭಾ ಸ್ಥಾನಗಳ ಹಂಚಿಕೆಯಲ್ಲಿ ಭಾರಿ ವ್ಯತ್ಯಯವಾಗಲಿದೆ ಎಂದು ವಿವರಿಸಿದರು.
*ಕ್ಷೇತ್ರ ಮರುವಿಂಗಡಣೆ 2026 : ದಕ್ಷಿಣ vs ಉತ್ತರ ಭಾರತದ ರಾಜ್ಯಗಳ ಸ್ಥಾನಗಳ ತುಲನೆ*
”ಜನಸಂಖ್ಯೆ ನಿಯಂತ್ರಿಸಿದವರಿಗೆ ಶಿಕ್ಷೆ, ಹೆಚ್ಚಿಸಿದವರಿಗೆ ಬಹುಮಾನವೇ?” ಎಂದು ಪ್ರಶ್ನಿಸಿದ ಶಾಸಕರು, ಉತ್ತರ ಭಾರತದ ರಾಜ್ಯಗಳು ಹೆಚ್ಚಿನ ಸ್ಥಾನಗಳನ್ನು ಪಡೆಯುವುದರಿಂದ ದಕ್ಷಿಣದ ರಾಜ್ಯಗಳ ನಿರ್ಣಾಯಕ ಧ್ವನಿ ಸಂಸತ್ತಿನಲ್ಲಿ ಕುಸಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳಾ ಮೀಸಲಾತಿ ಎಂಬ ‘ಗಾಳ’: ಮಹಿಳೆಯರಿಗೆ ತಕ್ಷಣ 33% ಮೀಸಲಾತಿ ನೀಡಲು ಸಾಧ್ಯವಿದ್ದರೂ, ಕೇಂದ್ರವು ಅದನ್ನು 2029 ಅಥವಾ 2034ಕ್ಕೆ ಮುಂದೂಡುತ್ತಿದೆ. ಇದು ಕೇವಲ ಚುನಾವಣಾ ಲಾಭಕ್ಕಾಗಿ ಹೂಡಿರುವ ತಂತ್ರ ಎಂದು ಶಾಸಕರು ಟೀಕಿಸಿದರು.
ರಾಜಕೀಯ ಅಸಮತೋಲನ:- ಕ್ಷೇತ್ರ ಮರುವಿಂಗಡಣೆಯಾದರೆ ಲೋಕಸಭೆಯಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ 543 ರಿಂದ 848ಕ್ಕೆ ಏರಬಹುದು. ಇದರಲ್ಲಿ ಹಿಂದಿ ಭಾಷಿಕ ರಾಜ್ಯಗಳ ಪಾರುಪತ್ಯ ಹೆಚ್ಚಲಿದ್ದು, ದಕ್ಷಿಣ ಭಾರತದ ರಾಜ್ಯಗಳ ತೆರಿಗೆ ಪಾಲು ಮತ್ತು ಹಕ್ಕುಗಳ ಮೇಲೆ ಗದಾಪ್ರಹಾರವಾಗಲಿದೆ ಎಂದರು.
“ನಾವು ಶಿಕ್ಷಣ ಮತ್ತು ಕುಟುಂಬ ಯೋಜನೆಯಲ್ಲಿ ಸಾಧನೆ ಮಾಡಿದ್ದೇವೆ. ಈ ಸಾಧನೆಯೇ ನಮಗೆ ರಾಜಕೀಯವಾಗಿ ಮುಳುವಾಗುತ್ತಿರುವುದು ದುರಂತ, ಕೇಂದ್ರ ಸರ್ಕಾರಕ್ಕೆ ಮಹಿಳೆಯರ ಸಬಲೀಕರಣದ ಮೇಲೆ ನಿಜವಾದ ಆಸಕ್ತಿ ಇದ್ದರೆ, ಕ್ಷೇತ್ರ ಮರುವಿಂಗಡಣೆಯ ಷರತ್ತನ್ನು ತೆಗೆದುಹಾಕಿ ಇಂದೇ ಮೀಸಲಾತಿ ಜಾರಿಗೊಳಿಸಲಿ. ದಕ್ಷಿಣ ಭಾರತದ ಹಿತಬಲಿಯನ್ನು ಪಡೆಯುವ ಇಂತಹ ಕುತಂತ್ರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದ್ದಾರೆ,”