KOPPAL NEWS : ಸತತ ಅಧ್ಯಯನದಿಂದ ಗುರಿ ಸಾಧಿಸಲು ಸಾಧ್ಯ : ಪ್ರಸನ್ನ ಗಡಾದ

You are currently viewing KOPPAL NEWS : ಸತತ ಅಧ್ಯಯನದಿಂದ ಗುರಿ ಸಾಧಿಸಲು ಸಾಧ್ಯ : ಪ್ರಸನ್ನ ಗಡಾದ

KOPPAL NEWS : ಸತತ ಅಧ್ಯಯನದಿಂದ ಗುರಿ ಸಾಧಿಸಲು ಸಾಧ್ಯ : ಪ್ರಸನ್ನ ಗಡಾದ

ಪ್ರಜಾವೀಕ್ಷಣೆ ಸುದ್ದಿ : 

ಕೊಪ್ಪಳ ಫೆ. 10 : ವಿದ್ಯಾರ್ಥಿಗಳು ಅಧ್ಯಯನದಲ್ಲಿ ತಮ್ಮನ್ನು ಕ್ರಿಯಾಶೀಲಗೊಳಿಸಿಕೊಳ್ಳುವ ಮೂಲಕ ಗುರಿ ಸಾಧಿಸಲು ಪ್ರಯತ್ನಿಸಬೇಕು ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಪ್ರಸನ್ನ ಗಡಾದ ಹೇಳಿದರು.

ಇಂದು ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸರಸ್ವತಿ ಪೂಜಾ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಹಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ನಾಣ್ಣುಡಿಯಂತೆ ಇಂದು ಎಲ್ಲಾ ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆದು ಆದರ್ಶ ಬದುಕನ್ನು ರೂಪಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಅಧ್ಯಯನದಲ್ಲಿ ತಮ್ಮನ್ನು ಕ್ರಿಯಾಶೀಲಗೊಳಿಸಿಕೊಳ್ಳುವ ಮೂಲಕ ಗುರಿ ಸಾಧಿಸಲು ಪ್ರಯತ್ನಿಸಬೇಕು ಎಂದರು.

ಅದೇ ರೀತಿಯಾಗಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಶಾಸಕರ ಅನುದಾನದಲ್ಲಿ ಕಾಲೇಜಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಕಾಲೇಜಿನ ವಾರ್ಷಿಕ ವರದಿಯನ್ನು ಹಿರಿಯ ಉಪನ್ಯಾಸಕರಾದ ಎಸ್ ವಿ ಮೆಳಿ ವಾಚನ ಮಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ ಪೂಜಾರ, ಮಂಜುಳ ಉಂಡಿ, ಗಂಗಮ್ಮ ಚಿಕೆನಕೊಪ್ಪ, ಹಾಗೂ ಆಶ್ರಯ ಸಮಿತಿ ಸದಸ್ಯರಾದ ಪದ್ಮಾವತಿ ಕಂಬಳಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಉಪನ್ಯಾಸಕರಾದ ಪತ್ರೆಪ್ಪ ಚತ್ತರಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಪ್ರಾಚಾರ್ಯರಾದ ಶಿವಾನಂದ ಎ ಆರ್ ಮಾತನಾಡಿ, ‘ವಿದ್ಯಾರ್ಥಿನಿಯರು ಉತ್ತಮವಾಗಿ ಅಧ್ಯಯನ ಮಾಡಿ ಒಳ್ಳೆಯ ಫಲಿತಾಂಶ ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.

ಎಸ್ ಎ ರಾಜಪುತ್ ಸ್ವಾಗತಿಸಿದರು. ಉಪನ್ಯಾಸಕಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಪರಶುರಾಮ ವಂದಿಸಿದರು. ವರ್ಷದುದ್ದಕ್ಕೂ ವಿವಿಧ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು, ಸರ್ವ ಸದಸ್ಯರು, ಕಾಲೇಜಿನ ಸರ್ವ ಸಿಬ್ಬಂದಿ ವರ್ಗ, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಎಲ್ಲಾ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಹಾಜರಿದ್ದರು.

Leave a Reply

error: Content is protected !!