LOCAL NEWS : ಕುಕನೂರು | ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೃತ್ತ ಲೋಕಾರ್ಪಣೆ: ಭಕ್ತಿ-ಭಾವದ ಅದ್ದೂರಿ ಜಯಂತಿ ಉತ್ಸವ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಮೇ 10 : ತಾಲೂಕಿನ ಶಿರೂರು ಗ್ರಾಮದಲ್ಲಿ ಇಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ನಿಮಿತ್ತ ನೂತನವಾಗಿ ನಿರ್ಮಿಸಲಾದ ‘ಹೇಮರೆಡ್ಡಿ ಮಲ್ಲಮ್ಮ ವೃತ್ತ’ವನ್ನು ಕುಕನೂರು ಪಟ್ಟಣದ ಅನ್ನದಾನೇಶ್ವರ ಶಾಖಾಮಠದ ಮಹದೇವ ಮಹಾಸ್ವಾಮಿಗಳ ನೇತೃತ್ವದಲ್ಲಿ ವೃತ್ತವನ್ನು ಉದ್ಘಾಟಿಸಲಾಯಿತು.
ಬಳಿಕ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಮಲ್ಲಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ವೇಳೆಯಲ್ಲಿ ಪೂಜ್ಯ ಮಹದೇವ ಸ್ವಾಮೀಜಿಗಳ ಆಶೀರ್ವಚನ ನೀಡಿದ್ದು, ”ಹೇಮರೆಡ್ಡಿ ಮಲ್ಲಮ್ಮ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಸಹನೆ, ಭಕ್ತಿ ಮತ್ತು ಸ್ತ್ರೀ ಶಕ್ತಿಯ ಸಂಕೇತ. ಕೌಟುಂಬಿಕ ಹಿಂಸೆ ಮತ್ತು ಕಷ್ಟಗಳ ನಡುವೆಯೂ ಮಲ್ಲಿಕಾರ್ಜುನನ ಮೇಲೆ ಅಚಲ ವಿಶ್ವಾಸವಿಟ್ಟು ಜೀವನ ನಡೆಸಿದ ಅವರ ಬದುಕು ಇಂದಿನ ಪೀಳಿಗೆಗೆ ಮಾದರಿ. ಈ ವೃತ್ತವು ಕೇವಲ ಕಲ್ಲಿನ ಸ್ಮಾರಕವಾಗದೆ, ದಾರಿಯಲ್ಲಿ ಸಾಗುವ ಪ್ರತಿಯೊಬ್ಬರಿಗೂ ಸನ್ಮಾರ್ಗದ ದಾರಿದೀಪವಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜದ ಹಿರಿಯ ನಾಯಕ ಶಿವಣ್ಣ ರಾಯರೆಡ್ಡಿ ಮಾತನಾಡಿ, ‘ ಶಿವಶರಣೆ ಮಲ್ಲಮ್ಮನವರ ತತ್ತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇಂತಹ ಜಯಂತಿಗಳು ಮತ್ತು ಸ್ಮಾರಕಗಳು ಸಹಕಾರಿಯಾಗಲಿವೆ. “ಕಾಯಕವೇ ಕೈಲಾಸ” ಎಂಬ ಮಂತ್ರದೊಂದಿಗೆ ಸಂಸಾರದಲ್ಲೂ ಪರಮಾತ್ಮನನ್ನು ಕಂಡ ಮಲ್ಲಮ್ಮನವರ ಹಾದಿಯಲ್ಲಿ ನಾವು ಸಾಗಬೇಕಿದೆ. ಇಂದಿನ ಯುವ ಪೀಳಿಗೆಗೆ ನಮ್ಮ ಶರಣರ ಇತಿಹಾಸವನ್ನು ಪರಿಚಯಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.
