You are currently viewing BREAKING : ಗಂಗಾವತಿಯಲ್ಲಿ ದಾರುಣ ಘಟನೆ: ಕೌಟುಂಬಿಕ ಕಲಹ ; ತಂದೆ-ಅಕ್ಕನನ್ನು ಹತ್ಯೆಗೈದ ತಮ್ಮ..!

BREAKING : ಗಂಗಾವತಿಯಲ್ಲಿ ದಾರುಣ ಘಟನೆ: ಕೌಟುಂಬಿಕ ಕಲಹ ; ತಂದೆ-ಅಕ್ಕನನ್ನು ಹತ್ಯೆಗೈದ ತಮ್ಮ..!

BREAKING : ಗಂಗಾವತಿಯಲ್ಲಿ ದಾರುಣ ಘಟನೆ: ಕೌಟುಂಬಿಕ ಕಲಹ ; ತಂದೆ-ಅಕ್ಕನನ್ನು ಹತ್ಯೆಗೈದ ತಮ್ಮ..!

PV NEWS : 

ಗಂಗಾವತಿ, ಜೂ.07: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ತಂದೆ ಹಾಗೂ ಸ್ವಂತ ಅಕ್ಕನ ಮೇಲೆಯೇ ಚಾಕುವಿನಿಂದ ಮಾರಣಾಂತಿಕ ದಾಳಿ ನಡೆಸಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಪ್ರಗತಿ (19) ಎನ್ನುವ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ವೆಂಕಟನಾಯ್ಡು ಚಿಕಿತ್ಸೆ ಫಲಿಸದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಯಿ ಸೌಜನ್ಯ ಗಂಭೀರ ಗಾಯಗೊಂಡು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಲಗಳ ಪ್ರಕಾರ, ಕುಟುಂಬದ ಸದಸ್ಯರು ಶನಿವಾರ ರಾತ್ರಿ ಮನೆಯ ಅಂಗಳದಲ್ಲಿ ಕುಳಿತಿದ್ದ ವೇಳೆ ಕ್ಷುಲ್ಲಕ ವಿಚಾರಕ್ಕೆ ಜಗಳ ಆರಂಭವಾಗಿದೆ. ಮಳೆ ಬಂದ ಹಿನ್ನೆಲೆಯಲ್ಲಿ ಮನೆಯೊಳಗೆ ಹೋದ ಬಳಿಕ ವಾಗ್ವಾದ ತೀವ್ರಗೊಂಡಿದ್ದು, ಕೋಪಗೊಂಡ ಕಿರಿಯ ಪುತ್ರ ಸಾಯಿ ವೆಂಕಟ ಮಣಿ ದೀಪ (18) ಮನೆಯಲ್ಲಿದ್ದ ಚಾಕುವಿನಿಂದ ತಂದೆ, ತಾಯಿ ಮತ್ತು ಅಕ್ಕನ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ದಾಳಿಯಲ್ಲಿ ಅಕ್ಕ ಪ್ರಗತಿ ಅವರ ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಡೆಯಲು ಮುಂದಾದ ತಂದೆ ವೆಂಕಟನಾಯ್ಡು ಅವರ ಮೇಲೆಯೂ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮನೆಯೊಳಗಿನಿಂದ ಸಹಾಯಕ್ಕಾಗಿ ಕೂಗಾಟ ಕೇಳಿ ನೆರೆಹೊರೆಯವರು ಹಾಗೂ ಕುಟುಂಬದ ಸದಸ್ಯರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ರಕ್ತದ ಮಡುವಿನಲ್ಲಿ ಗಾಯಾಳುಗಳು ಬಿದ್ದಿರುವುದು ಕಂಡುಬಂದಿದೆ. ದಾಳಿ ನಡೆಸಿದ ಯುವಕ ತಾನೂ ಗಾಯ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಸದ್ಯ ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

error: Content is protected !!