
ಬೆಂಗಳೂರು : ಡಾ. ರಾಜ್ ಕುಟುಂಬದ ಹಿರಿಯ ಸೊಸೆ ಗೀತಾ ಶಿವರಾಜ್ ಕುಮಾರ್ ಅವರು ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಈ ಬಗ್ಗೆ ನಟ ಡಾ. ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಮಾಧ್ಯಮವರೊಂದಿಗೆ ಮಾತನಾಡಿದ ಶಿವಣ್ಣ, ‘ಗೀತಾ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಖುಷಿಯ ವಿಚಾರ, ನಾಳೆಯಿಂದ ಸೊರಬದಲ್ಲಿ ಪ್ರಚಾರಕ್ಕೆ ತೆರಳುತ್ತಾರೆ. ಅವರ ಜೊತೆಗೆ ನಾನೂ ಹೋಗ್ತಿದ್ದೇನೆ. ಸೊರಬದಲ್ಲಿ ಮಧು ಹಾಗೂ ಅವರ ಮಾವ ಭೀಮಾ ನಾಯಕ್ ಶಿರಸಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇಬ್ಬರೂ ಗೆಲ್ಲಲಿ ಎಂದು ಹಾರೈಸುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಮಾಜಿ ಸಿಎಂ ದಿ. ಬಂಗಾರಪ್ಪ ಅವರ ಪುತ್ರಿ ಗೀತಾ ಅವರು 2014 ರಲ್ಲಿ ಜೆಡಿಎಸ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಅದಾದ ನಂತರ ಈ ವೇಳೆ ಜೆಡಿಎಸ್ ನಲ್ಲಿ ಜೊತೆಗೆ ಸಹೋದರ ಮಧುಬಂಗಾರಪ್ಪ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿ ಸೊರಬದಿಂದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಇಂದು ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.