You are currently viewing LOCAL NEWS :​ “ಯುವಜನರು ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ಡಾ. ಜೀವನಸಾಬ್ ವಾಲಿಕಾರ.!

LOCAL NEWS :​ “ಯುವಜನರು ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ಡಾ. ಜೀವನಸಾಬ್ ವಾಲಿಕಾರ.!

LOCAL NEWS :​ “ಯುವಜನರು ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ಡಾ. ಜೀವನಸಾಬ್ ವಾಲಿಕಾರ.!

PV NEWS : 
ಕುಕನೂರು, ಜೂ.21: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ನೆಲೆಸಬೇಕಾದರೆ ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ್ ವಾಲಿಕಾರ ಹೇಳಿದರು.

ಅವರು ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದ ಸಭಾಂಗಣದಲ್ಲಿ ಬಳಗೇರಿ ಗ್ರಾಮ ಪಂಚಾಯತ್, ಎಐಡಿವೈಓ (AIDYO) ಕೊಪ್ಪಳ ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆ, ಕಕ್ಕಿಹಳ್ಳಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಸಾಂವಿಧಾನಿಕ ಮೌಲ್ಯಗಳ ಅನುಷ್ಠಾನ ಮತ್ತು ಭ್ರಾತೃತ್ವ’ ಕುರಿತ ಯುವಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು. ಬಳಿಕ ಗಣ್ಯರು ಸೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಉಪನ್ಯಾಸ ನೀಡಿದ ಅವರು, ಹಾಡುಗಳು, ನುಡಿಗಟ್ಟುಗಳು ಹಾಗೂ ಜನಪದ ಉದಾಹರಣೆಗಳ ಮೂಲಕ ಸಂವಿಧಾನದ ಮೌಲ್ಯಗಳನ್ನು ಸರಳವಾಗಿ ಹಾಗೂ ಮನಮುಟ್ಟುವ ರೀತಿಯಲ್ಲಿ ವಿವರಿಸಿದರು. ಭಿನ್ನತೆಗಳ ನಡುವೆ ಭ್ರಾತೃತ್ವ, ಪರಸ್ಪರ ಗೌರವ ಮತ್ತು ಸಹಿಷ್ಣುತೆಯ ಮನೋಭಾವ ಬೆಳೆಸಿದಾಗ ಮಾತ್ರ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಶಿಬಿರದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂವಿಧಾನ ಸಂರಕ್ಷಣಾ ವೇದಿಕೆಯ ಸಂಚಾಲಕ ಭೀಮಾಶಂಕರ್ ಪಾಣೇಗಾಂವ್, ಜಾತಿ, ಧರ್ಮ, ಪ್ರಾಂತ್ಯ, ಭಾಷೆ ಹಾಗೂ ಲಿಂಗ ಆಧಾರಿತ ತಾರತಮ್ಯಗಳನ್ನು ತೊರೆದು ಭ್ರಾತೃತ್ವದ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬ ನಾಗರಿಕರೂ ಭಾರತದ ಸಂವಿಧಾನವನ್ನು ಓದಿ, ಅದರ ಆಶಯಗಳನ್ನು ಅರ್ಥೈಸಿಕೊಂಡು, ಸಂವಿಧಾನದ ಮೂಲ ತತ್ವಗಳನ್ನು ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು. ಸಂವಿಧಾನದ ಆಶಯಗಳು ಕೇವಲ ಪುಸ್ತಕದಲ್ಲೇ ಉಳಿಯದೆ ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಅನುಷ್ಠಾನಗೊಳಿಸಲು ಪ್ರತಿಯೊಬ್ಬರೂ ಬದ್ಧರಾಗಬೇಕು. ಸಮಾಜದಲ್ಲಿರುವ ಅಸಮಾನತೆ, ಅನ್ಯಾಯ ಮತ್ತು ತಾರತಮ್ಯಗಳನ್ನು ನಿವಾರಿಸಿ, ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯುವಜನರು ಮುಂಚೂಣಿಯಲ್ಲಿ ನಿಲ್ಲುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಸಂವಿಧಾನ ಚಿಂತಕ ಧರ್ಮರಾಜ್ ಗೋನಾಳ ಮಾತನಾಡಿ, ಸಂವಿಧಾನದಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಆಶಯಗಳನ್ನು ಯುವಜನರು ಅರ್ಥಮಾಡಿಕೊಂಡು ಸಮಾಜದಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಸಾಮಾಜಿಕ ಹೋರಾಟಗಾರ ಸುರೇಶ್ ಬಳೂಟಗಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಂವಿಧಾನದ ಆಶಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ಕುರಿತು ನಿರಂತರ ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗೌರಿ ಗೋನಾಳ್ ಅವರು ಸಂವಿಧಾನ ಜಾಗೃತಿ ಗೀತೆಗಳನ್ನು ಹಾಡಿದರು.

ಭಾಗವಹಿಸಿದ್ದ ಶಿಬಿರಾರ್ಥಿಗಳೆಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. ಬಳಗೇರಿ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಕುಮಾರಿ ರಾಣಿ ಹಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಮೇಘರಾಜ್ ಬಳಗೇರಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಯಮನೂರಪ್ಪ ಕಟ್ಟಿಮನಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿರುಪಾಕ್ಷಯ್ಯ ಕುರ್ತಕೋಟಿ, ಎಸ್‌ಡಿಎಂಸಿ ಅಧ್ಯಕ್ಷ ಯಮನೂರಪ್ಪ ಆರ್. ಭಾನಾಪುರ, ಪತ್ರಕರ್ತ ಚಂದ್ರು ಆರ್. ಭಾನಾಪುರ, ಶಶಿಕುಮಾರ ಬಳಿಗೇರಿ, ಹಂಪಣ್ಣ ಕಟ್ಟಿಮನಿ , ಮಹಾದೇವಪ್ಪ ಹಿರೇಮನಿ, ಬಾಲಚಂದ್ರ ವೈ.ಟಿ., ಶಿವು ಬಳಗೇರಿ, ಜ್ಯೋತಿ ಎಂ. ಕಾರಭಾರಿ, ಗ್ರಂಥಪಾಲಕಿ ಗವಿಸಿದ್ದಮ್ಮ ಗೌಡ್ರ ಹಾಗೂ ತಿರುಪತಿ ತಲ್ಲೂರು, ಶಂಕ್ರಮ್ಮ ಕೆಂಭಾವಿ ಮಠ ಸೇರಿದಂತೆ ಸಂವಿಧಾನ ಸಂಗಾತಿಗಳಾದ ಸಲ್ಮಾ ಜಾನ್, ನಿಂಗು ಬೆಣಕಲ್, ಶಶಿಕಲಾ ಮಠದ, ಕೃಷ್ಣವೇಣಿ, ಕರಿಯಪ್ಪ ಮಣ್ಣಿನವರ್, ದಿಲ್ ಶಾದ್ ಹಾಗೂ ಬಳಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಕ್ಕಿಹಳ್ಳಿ, ಕೋನಾಪುರ, ಬಳಗೇರಿ, ಹರಿಶಂಕರ ಬಂಡಿ ಹಾಗೂ ಚೆನ್ನಪ್ಪನಹಳ್ಳಿ ಗ್ರಾಮಗಳ 100ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಯುವಕ-ಯುವತಿಯರು ಹಾಗೂ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದ್ದರು.

“ಬಡತನ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಕೋಮುವಾದ ಹಾಗೂ ಜಾತಿವಾದದಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಟ ನಡೆಸಬೇಕಿದೆ. ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತಹ ಮಹನೀಯರ ವಿಚಾರಧಾರೆಗಳನ್ನು ಯುವಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಜೊತೆಗೆ ಉನ್ನತ ನೀತಿ, ನೈತಿಕತೆ, ಸಂಸ್ಕೃತಿ ಬೆಳೆಸಿಕೊಂಡಾಗ ಮಾತ್ರ ಸಮಾಜ ಬದಲಾವಣೆಗೆ ಪೂರಕವಾಗುತ್ತದೆ”.

– ಶರಣು ಪಾಟೀಲ್, ಎಐಡಿವೈಓ ಜಿಲ್ಲಾ ಕಾರ್ಯದರ್ಶಿ, ಕೊಪ್ಪಳ

“ಗ್ರಾಮೀಣ ಭಾಗದಲ್ಲಿ ಇನ್ನೂ ಅನೇಕ ಜನರು ಮೂಢನಂಬಿಕೆಗಳಿಗೆ ಒಳಗಾಗಿ ಸ್ವಯಂಘೋಷಿತ ಸಾಧು-ಸಂತರು ಹಾಗೂ ಪವಾಡಗಳ ಹೆಸರಿನಲ್ಲಿ ನಡೆಯುವ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಜನರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ . ಇದರಿಂದ ಹೊರಬಂದು ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಮತ್ತು ತಾರ್ಕಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಪವಾಡಗಳ ಹೆಸರಿನಲ್ಲಿ ನಡೆಯುವ ಕೆಲ ಮೋಸಗಳನ್ನು ಈ ಶಿಬಿರದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಬಯಲುಪಡಿಸಲಾಗಿದೆ. ಇಂತಹ ಪವಾಡಗಳು ಅಲೌಕಿಕ ಶಕ್ತಿಗಳಲ್ಲ, ಅವುಗಳ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಅರ್ಥಮಾಡಿಕೊಂಡು ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಅಗತ್ಯವಿದೆ. “

– ಆರ್. ವಿ. ಕಾಮನೂರ, ವೈಜ್ಞಾನಿಕ ಚಿಂತಕ, ಕೊಪ್ಪಳ

Prajavikshane

Chandru R Bhanapaur

Leave a Reply

error: Content is protected !!