ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಚುನಾವಣಾ ಕಾವು ಜೋರಾಗಿದೆ
. ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಬರುವ ಬಗ್ಗೆ ತೀವ್ರ ಕುತೂಹಲ ಉಂಟಾಗಿದೆ. ಈ ವಿಚಾರದ ಬಗ್ಗೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ನಟ ಸುದೀಪ್ ಅವರು ಇಂದು ಬಿಜೆಪಿ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಕೆಲ ಮೂಲಗಳು ತಿಳಿಸಿವೆ.
ಇಂದು ಮಧ್ಯಾಹ್ನ ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಪ್ರಧಾನ ಕಛೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ನಟ ಸುದೀಪ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಸುದೀಪ್ ಅವರು ನಿರ್ದಿಷ್ಟವಾಗಿ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಒಳ್ಳುವ ಅನುಮಾನವೂ ಇತ್ತು, ಆದರೆ, ಅಂತಿಮವಾಗಿ ಸುದೀಪ್ ಅವರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ನಟ ಸುದೀಪ್ ಅವರು ಬಿಜೆಪಿ ಸೇರ್ಪಡೆಯಾದರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನಲಾಗಿದೆ. ಅವರ ಬದಲಾಗಿ ತಮ್ಮ ಪರಮಾಪ್ತ ನಿರ್ಮಾಪಕ ಜಾಕ್ ಮಂಜು ಅವರನ್ನು ಬೆಂಗಳೂರರಿನ ಚಿಕ್ಕಪೇಟೆಯಿಂದ ಕಣಕ್ಕಿಳಿಸಲಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಸದ್ಯಕ್ಕೆಲ್ಲಾ ನಟ ಸುದೀಪ್ ಅವರಿಂದಲೇ ಸ್ಪಷ್ಟನೆ ಸಿಗಬೇಕಾಗಿದೆ.