LOCAL BREAKING : ದಲಿತರಿಗೆ ಕೊಟ್ಟ ಜಮೀನು ಸೋಲಾರ್ ಪಾಲು…!!
ಕುಕನೂರು : ತಳಕಲ್ ಗ್ರಾಮದ ದಲಿತ ಸಮುದಾಯದ ರೈತರಿಗೆ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ ಸುಮಾರು 8 ಎಕರೆ ಭೂಮಿಯನ್ನು ಮೂಲ ಮಾಲೀಕರು ದಲಿತರನ್ನು ಯಾಮಾರಿಸಿ ಸೋಲಾರ್ ಕಂಪನಿಗೆ ಮಾರಾಟ ಮಾಡಿದ್ದು ಕಂಗಲಾದ ರೈತರು ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ತಳಕಲ್ ಗ್ರಾಮದ ಈರವ್ವ ಮಾದರ್, ಶಿವವ್ವ ಹನುಮಂತಪ್ಪ, ಶಾಂತವ್ವ ಹುಚ್ಚಪ್ಪ ಮತ್ತು ಕಾಶವ್ವ ಗುಡದಪ್ಪ ಎನ್ನುವ ಪಲಾನುಭವಿಗಳಿಗೆ ತಲಾ ಎರಡು ಎಕರೆಯಂತೆ 2007 -08 ರಲ್ಲಿ ಸರ್ಕಾರ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಇಲಾಖೆ ಮಂಜೂರು ಮಾಡಿದೆ. ಅಲ್ಲಿಂದ ಇಲ್ಲಿಯವರಿಗೆ ಫಲನುಭವಿಗಳು ಜಮೀನನ್ನು ಉಳುಮೆ ಮಾಡಿಕೊಂಡು ಬಂದಿರುತ್ತಾರೆ. ಈಗ ಏಕಏಕಿ ಜಮೀನ ಸರ್ವೇ ನಂಬರ್ 696 ರ ಭೂ ಮಾಲೀಕ ಪಲಾನುಭವಿಗಳಿಗೆ ಭೂಮಿಯನ್ನು ಬಿಟ್ಟುಕೊಡದೆ ಸರ್ಕಾರದಿಂದ ಬಂದ ಹಣವನ್ನು ನುಂಗಿ ಅಕ್ರಮ ಮಾರ್ಗದಲ್ಲಿ ಸೋಲಾರ್ ಕಂಪನಿಗೆ ಭೂಮಿ ಮಾರಿದ್ದಾನೆ, ಅನ್ಯಾಯ ಮಾಡಿದ್ದಾರೆ ಎಂದು ದಲಿತ ಕುಟುಂಬದ ರೈತರು ತಮ್ಮ ಅಳಲು ತೋಡಿ ಕೊಂಡಿದ್ದಾರೆ.
ಸದರಿ ವಂಚನೆ ಮಾಡಿದ ಭೂ ಮಾಲೀಕರ ವಿರುದ್ದ ಕ್ರಮ ಕೈಕೊಳ್ಳಬೇಕು ಎಂದು ರೈತರು ತಮ್ಮ ಜಮೀನಿನಲ್ಲಿ ಇಡೀ ಹಗಲು ಬಿಸಿಲಲ್ಲಿ ಕುಳಿತು ನ್ಯಾಯಕ್ಕೆ ಮೊರೆ ಹೋಗಿದ್ದಾರೆ.
ರೈತರಿಗೆ ಬೆನ್ನೆಲುಬಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಡಿ ಎಸ್ ಎಸ್ ಜಿಲ್ಲಾಧ್ಯಕ್ಷ ನಿಂಗಪ್ಪ ಬೇಣಕಲ್ ಮಾತನಾಡಿ, ದಲಿತರಿಗೆ ಮಂಜೂರಾದ ಭೂಮಿಯನ್ನು ಪ್ರದೀಪ್ ಎನ್ನುವರು ಅಕ್ರಮವಾಗಿ ಸೋಲಾರ್ ಕಂಪನಿಗೆ ಮಾರಿದ್ದಾರೆ. ಇದರಿಂದ ಭೂ ಒಡೆತನ ಅಡಿಯಲ್ಲಿ ಜಮೀನು ಪಡೆದ ರೈತರಿಗೆ ಅನ್ಯಾಯವಾಗಿದೆ. ಈಗಿರುವ ಸಮಸ್ಯೆಯನ್ನು ಸರಿಪಡಿಸಿ ಸದರಿ ರೈತರ ಹೆಸರಿಗೆ ಪಹಣಿ ಪತ್ರ ಕೊಟ್ಟು ಜಮೀನು ಬಿಟ್ಟು ಕೊಡಲು ಅಗ್ರಹಿಸಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನನ್ನು ನಂಬಿಕೊಂಡಿರುವ ಕುಟುಂಬ ಈಗ ಬೀದಿಗೆ ಬಂದಿದೆ. ಕೂಡಲೇ ಜಿಲ್ಲಾಧಿಕಾರಿಗಳು, ಉಪ ವಿಭಾಗಧಿಕಾರಿಗಳು ಇತ್ತ ಗಮನಿಸಿ ಅರ್ಹ ದಲಿತ ಪಲಾಭುವಿ ಕುಟುಂಬಕ್ಕೆ ಜಮೀನನ್ನು ಮರಳಿಸಲು ವಿನಂತಿ ಮಾಡಿಕೊಂಡಿದ್ದಾರೆ.
ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ದಲಿತರಿಗೆ ಆಗಿರುವ ಅನ್ಯಾಯ ಖಂಡಿಸಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಯಲ್ಲಪ್ಪ ಮ್ಯಾಗಳಕೇರಿ,ಸುಂಕಪ್ಪ ಮೀಸಿ,ಕರಿಯಪ್ಪ ಮಣ್ಣಿನವರ, ಶ್ರೀಕಾಂತ್ ಹೊಸಮನಿ, ಗಾಳೇಶ್ ಮಕ್ಕಲ್ಲಿ, ಕಾಶಮ್ಮ ಕೋಳೂರು, ಮುದಿಯಪ್ಪ ಛಲವಾದಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.