ಕನಕಗಿರಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಳೆದ ವರ್ಷದ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಬೇಕು ಎಂದು ಪಿಡಿಓ ರವರಿಗೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಪ್ರಕಾಶ್ ವಡ್ಡರ್ ಹೇಳಿದರು.
ಅವರು, ತಾಲೂಕಿನ ಹುಲಿಹೈದರ್ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ, ಗ್ರಾ.ಪಂ ವತಿಯಿಂದ ನರೇಗಾ ಯೋಜನೆಯಡಿ ಅನುಷ್ಟಾನಗೊಂಡ ಹಾಗೂ ಪ್ರಗತಿಯಲ್ಲಿರುವ ಸಿಸಿ ಚರಂಡಿ, ಅಡುಗೆ ಕೋಣೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಮಾತನಾಡಿದರು.
ನಂತರ ಗ್ರಾ.ಪಂ ನಲ್ಲಿ ನಡೆಯುತ್ತಿರುವ ಸಾಮಾಜಿಕ ಪರಿಶೋಧನೆಯ ಪ್ರಕ್ರಿಯೆಯನ್ನು ವೀಕ್ಷಿಸಿ, ಸಾಮಾಜಿಕ ಪರಿಶೋಧನೆಯನ್ನು ಸರಿಯಾಗಿ ಮಾಡಿ, ಪರಿಶೋಧನೆಯಲ್ಲಿ ಕಂಡುಬಂದ ಕಡತಗಳಲ್ಲಿನ ನ್ಯೂನತೆಗಳನ್ನು ಗ್ರಾಮಸಭೆಯಲ್ಲಿ ಮಂಡಿಸಿ, ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲು ತಿಳಿಸಿದರು.
ಇದೇ ವೇಳೆ ಕೂಸಿನ ಮನೆಗೆ ಭೇಟಿ ನೀಡಿ, ಕೂಸಿನ ಮನೆಗೆ ಮೂಲಸೌಕರ್ಯಗಳನ್ನು ಒದಗಿಸಲು ಪಿಡಿಓ ರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ರಾಜಶೇಖರ್, ಪಿಡಿಓ ಅಮರೇಶ್ ರಾಠೋಡ್, ತಾಂತ್ರಿಕ ಸಂಯೋಜಕ ಸಯ್ಯದ್ ತನ್ವೀರ್, ಸೋಶಿಯಲ್ ಆಡಿಟರ್ ಸಂಗಾರೆಡ್ಡಿ, ಗ್ರಾ.ಪಂ ಸಿಬ್ಬಂದಿಗಳಾದ ಶ್ರೀನಿವಾಸ್, ನಾಗೇಶ್, ಕಸ್ತೂರಿ ಸೇರಿದಂತೆ ಹಲವರು ಹಾಜರಿದ್ದರು.