LOCAL NEWS : ಸರ್ಕಾರಿ ಕಾಮಗಾರಿಗಳ ಕುರಿತು ಗುಣಮಟ್ಟ ಪರಿಶೀಲಿಸುವ ಜ್ಞಾನವಿರಲಿ : ಶಾಸಕ ರಾಯರೆಡ್ಡಿ
ಕುಕನೂರು : ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಕಾರಿ ಕಾಮಗಾರಿಗಳ ಅಥವಾ ಕಟ್ಟಡಗಳ ಕುರಿತು ಗುಣಮಟ್ಟ ಪರಿಶೀಲಿಸುವ ಜ್ಞಾನವಿರಬೇಕು ಜೊತೆಗೆ ಸಲಹೆ ಸೂಚನೆಗಳು ನೀಡುವಂತರಾಗಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಇಂದು ತಾಲೂಕಿನ ತಾಳಬಾಳ ಗ್ರಾಮದಲ್ಲಿ ನೂತನ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿಗಳ ಶಂಕು ಸ್ಥಾಪನೆಯನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ನೆರವೇರಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾಯ ರೆಡ್ಡಿ, ‘ಇತ್ತೀಚಿಗೆ ಯಾವುದೇ ಕಟ್ಟಡಗಳು ಇರಲಿ ಅದರ ಜೀವಿತಾವಧಿ ಕನಿಷ್ಠಪಕ್ಷ 50 ವರ್ಷವಾದರೆ ಇರಬೇಕಾಗುತ್ತದೆ, ಆದರೆ ಕೆಲವು ಪ್ರಕರಣಗಳಲ್ಲಿ ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ಕಟ್ಟಿದ ಐದು ವರ್ಷದಲ್ಲೇ ಕಟ್ಟಡಗಳು ಕೃಷಿಯುವಂತ ಅಥವಾ ಬಿರುಕು ಬಿಡುವಂತಹ ಪ್ರಕರಣಗಳನ್ನು ಕಂಡಿದ್ದೇನೆ, ಹಾಗಾಗಿ ನಿಮ್ಮೂರಿನಲ್ಲಿ ಶಾಲಾ ಕೊಠಡಿಗಳ ನಿರ್ಮಾಣವಾಗುತ್ತಿರುವಾಗಲೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಊರಿನ ಪ್ರಜ್ಞಾವಂತರು ಅದನ್ನ ಪರಿಶೀಲಿಸಿ ಅಚ್ಚುಕಟ್ಟಾಗಿ ನಿರ್ಮಾಣ ಮಾಡುವಂತೆ ನೀವು ಸಲಹೆ ಸೂಚನೆಯನ್ನು ನೀಡಬೇಕಾಗುತ್ತದೆ’ ಎಂದು ಹೇಳಿದರು.
‘ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಮೂಲ ಸೌಲಭ್ಯಗಳ ಯಾವುದೇ ರೀತಿ ಕೊರತೆ ಇಲ್ಲದೆ ಈ ಭಾಗದ ಎಲ್ಲಾ ಶಾಲೆಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದ್ದು, ಇನ್ನುಳಿದಂತೆ ಎಲ್ಲೆಲ್ಲಿ ಅವಶ್ಯಕತೆ ಇದೆ ಎಂದು ತಿಳಿದು ಅದನ್ನು ಪೂರೈಸುವ ಕಾರ್ಯಗಳು ನಡೆಯುತ್ತಿದೆ’ ಎಂದರು.
‘ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ನಮ್ಮ ಸರ್ಕಾರ ಪೂರ್ಣಾವಧಿಯವರೆಗೂ ಈ 5 ಗ್ಯಾರಂಟಿಗಳು ನಿರಂತರವಾಗಿ ಜಾರಿಯಲ್ಲಿರುತ್ತದೆ. ಇನ್ನುಳಿದ 2 ವರ್ಷ 9 ತಿಂಗಳು ಸಿದ್ದರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿ ಆಗಿ ಇರಲಿದ್ದಾರೆ. ಸಿದ್ದರಾಮಯ್ಯನವರು ಜನಪರ ಆಡಳಿತ ನೀಡುತ್ತಿದ್ದು, ಕರ್ನಾಟಕ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದಕ್ಕೆ ಈ ಗ್ಯಾರಂಟಿ ಯೋಜನೆಗಳು ಬಹು ಮುಖ್ಯ ಪಾತ್ರ ವಹಿಸಿವೆ’ ಎಂದರು.
ಈ ಸಂದರ್ಭದಲ್ಲಿ ಕುಕನೂರು ತಾಲೂಕು ತಹಶೀಲ್ದಾರ್ ಹೆಚ್ ಪ್ರಾಣೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಪಾಟೀಲ್ ಬಿರಾದಾರ್, ಶಾಲಾ ಶಿಕ್ಷಣ ಇಲಾಖೆಯ ಪ್ರಬಾರ ಉಪನಿರ್ದೇಶಕರು ಹಾಗೂ ಯಲಬುರ್ಗಾ ಕುಕುನೂರು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ್ ಗೌಡ ಚೆಂಡೂರ, ಕಾಂಗ್ರೆಸ್ ಹಿರಿಯ ಮುಖಂಡ ಸತ್ತ ನಾರಾಯಣಪ್ಪ ಹರಪ್ಪನಹಳ್ಳಿ, ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ಮುಖಂಡರಾದ ಶರಣಪ್ಪ ಗಾಂಜಿ, ಡಾ. ಧಾನರೆಡ್ಡಿ, ಮಂಜುನಾಥ್, ತಿಮ್ಮಣ್ಣ ಚೌಡ್ಕಿ, ಗ್ರಾಮ ಪಂಚಾಯತ್ ಸದಸ್ಯ ದೇವೇಂದ್ರಪ್ಪ ಕಮ್ಮಾರ, ಪಿಡಿಒ ಸದಸ್ಯರುಗಳು ಹಾಗೂ ಸಾರ್ವಜನಿಕರು ಇದ್ದರು.