-
ಮುದಗಲ್ಲ ವರದಿ
ಕುಡಿಯುವ ನೀರಿಗಾಗಿ ಡಿಎಸ್ಎಸ್ ಸಂಘಟನೆ ಆಕ್ರೋಶ : ಶಾಸಕರಿಗೆ ಮುತ್ತಿಗೆ..
ಮುದಗಲ್ : ಪಟ್ಟಣದ ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಕೆ ಮಾಡಬೇಕು ಇಲ್ಲದಿದ್ದರೆ ಇವತ್ತು ನೂತನ ವಾಹನಗಳ ಪೂಜೆ ಸಲ್ಲಿಸಲು ಬಿಡುವುದಿಲ್ಲವೆಂದು ಡಿಎಸ್ಎಸ್ ಸಂಘಟನೆಯವರು ಲಿಂಗಸಗೂರ ಕ್ಷೇತ್ರ ಶಾಸಕ ಮಾನಪ್ಪ ಡಿ. ವಜ್ಜಲ್ ಅವರಿಗೆ ಇಲ್ಲಿನ ಪುರಸಭೆ ಮುಂಭಾಗದಲ್ಲಿ ತಡೆದು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯವರು ಶಾಸಕರನ್ನು ತಡೆದು ಚುನಾವಣೆಯಾಗಿ ಎರಡು ವರ್ಷ ಕಳೆದರು ಇಲ್ಲಿಯವರೆಗೆ ಯಾವ ಕಾರ್ಯ ಮಾಡಿದ್ದೀರಿ. ಪಟ್ಟಣದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ಸುಮಾರು ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವವುದು ನಿಮ್ಮ ಗಮನಕ್ಕೆ ಇಲ್ಲವೇನು. ಪಟ್ಟಣದಲ್ಲಿ 15ದಿನಕೊಮ್ಮೆ ಕುಡಿಯುವ ನೀರಿನ ಪೂರೈಕೆ ಸಮಸ್ಯೆ ತಲೆ ಎತ್ತಿರುವದು ತಮಗೆ ತಿಳಿದಿಲ್ಲವೇ. ಪಟ್ಟಣದಲ್ಲಿ ಕಳೆದ ವರ್ಷ 8ದಿನಕೊಮ್ಮೆ ನೀರು ಪೂರೈಕೆ ಯಾಗುತಿತ್ತು. ಈ ವರ್ಷ 15ದಿನಕೊಮ್ಮೆ ನೀರು ಪೂರೈಕೆ ಯಾಗುತ್ತಿದೆ ಎಂದು ಸಂಘಟನೆಯವರು ಶಾಸಕರೊಂದಿಗೆ ಮಾತಿನ ಚಕಮಕಿಗೆ ಇಳಿದರು.
ಶಾಸಕ ಮಾನಪ್ಪ ಡಿ. ವಜ್ಜಲ್ ಅವರು ಸಂಘಟನೆಯವರನ್ನು ಸಮಾಧಾನಪಡಿಸಿ ಸಮಸ್ಯೆಯನ್ನು ಆಲಿಸಿದರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು ಪಟ್ಟಣಕ್ಕೆ 24×7 ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗೆ ಈಗಾಗಲೇ ಅಮೃತ ಯೋಜನೆಗೆ ಪ್ರಸ್ತುತವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಿಸಿ ರಸ್ತೆಗಾಗಿ ಒಂದು ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ. ಇನ್ನೂ 7-8 ತಿಂಗಳಲ್ಲಿ ಪಟ್ಟಣಕ್ಕೆ ಸಂಪೂರ್ಣ ಸಮರ್ಪಕ ನೀರು ಪೂರೈಕೆ ಮಾಡುವ ಭರವಸೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ ಕುಡಿಯುವ ನೀರಿನ ಸಮಸ್ಯೆಗೆ ಯಾಕೆ ಪುರಸಭೆ ಸದಸ್ಯರು ಮೌನ ವಹಿಸಿದ್ದಾರೆ. ಯಾಕೆ ಯಾರು ಇಲ್ಲಿಯವರೆಗೆ ನನ್ನ ಗಮನಕ್ಕೆ ಯಾರಾದ್ರೂ ಮನವಿಪತ್ರ ಕೂಡ ಸಲ್ಲಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಬ್ಲಾಕ್ ಅಧ್ಯಕ್ಷ ಉಲ್ಲೇಶ ಸಾಹುಕಾರ, ಗುರು ಬಸ್ಸಪ್ಪ ಸಜ್ಜನ್, ಫಕೀರಪ್ಪ ಕುರಿ, ಮುಖ್ಯಾಧಿಕಾರಿ ನರಸಾರೆಡ್ಡಿ, ತಾಲ್ಲೂಕು ಸಂಚಾಲಕ ಶರಣಪ್ಪ ಕಟ್ಟಿಮನಿ, ಸ್ಥಳೀಯ ಸಂಚಾಲಕ ಬಸವರಾಜ ಬಂಕದಮನಿ, ಕೃಷ್ಣ ಛಲವಾದಿ, ಕದಿರ ಪಾನ್ ವಾಲೆ, ಕರಿಯಪ್ಪ ಯಾದವ್, ಮಲ್ಲಪ್ಪ ಹೂಗಾರ, ಮಲ್ಲಪ್ಪ ಮಟೂರ್,ವೆಂಕಟೇಶ್ ಹಿರೇಮನಿ, ವಿರೂಪಾಕ್ಷ ಹೂಗಾರ, ಮಂಜುನಾಥ ನಂದವಾಡಗಿ, ಪರಶುರಾಮ, ಆದರ್ಶ ಸೇರಿದಂತೆ ಅನೇಕರಿದ್ದರು.
ವರದಿ:-ಮಂಜುನಾಥ ಕುಂಬಾರ